ಬೆಂಗಳೂರು, (ಜುಲೈ.06): ಸಾರಿಗೆ ಇಲಾಖೆ ಚಾಲಕರು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೆ ಸಚಿವ ಚೆಲುವರಾಯಸ್ವಾಮಿ ಕಾರಣ ಎಂದು ಕುಮಾರಸ್ವಾಮಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮಾಜಿ ಉಪಪ್ರಧಾನಮಂತ್ರಿ ಡಾ:ಬಾಬು ಜಗಜೀವನ್ ರಾಂ ಅವರ 37ನೇ ಪುಣ್ಯಸ್ಮರಣೆಯ ಅಂಗವಾಗಿ ವಿಧಾನ ಸೌಧದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೃತ ಚಾಲಕರು ಡೆತ್ ನೋಟಿನಲ್ಲಿ ಸಚಿವ ಚೆಲುವರಾಯಸ್ವಾಮಿಯವರ ಹೆಸರು ಬರೆದಿದ್ದು, ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಚಿವರ ರಾಜೀನಾಮೆ ಕೊಡಬೇಕು ಎಂದಿರುವ ಬಗ್ಗೆ ಮಾತನಾಡಿ, ಈ ಬಗ್ಗೆ ವಿಚಾರ ಮಾಡುತ್ತೇನೆ. ಅವರ ಪತ್ನಿ ಪಂಚಾಯತಿ ಸದಸ್ಯರು, ಅಧ್ಯಕ್ಷ ರಾಗುವ ಪ್ರಯತ್ನ ಮಾಡುತ್ತಿದ್ದಾರೆ. ಇಲಾಖೆ ವರ್ಗಾವಣೆ ಮಾಡಿದ್ದು, ವರ್ಗಾವಣೆ ಮಾಡಿದ ಕಾರಣಕ್ಕೆ ವಿಷ ಕುಡಿದಿದ್ದಾರೆ ಎಂದರು.
ಹೆಚ್.ಡಿ.ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಅವರು ವರ್ಗಾವಣೆಗಳ ಬಗ್ಗೆ ಹತಾಶರಾಗಿದ್ದಾರೆ. ಸರ್ಕಾರ ವರ್ಗಾವಣೆ ಮಾಡಲೇಬೇಕು, ಮಾಡುತ್ತಿದೆ. ಅದಕ್ಕೆ ಧಂಧೆ ನಡೆದಿದೆ, ಲಂಚ ಪಡೆದಿದ್ದಾರೆ ಎನ್ನುವುದು ಸುಳ್ಳು ಆರೋಪ. ಅವರ ಕಾಲದಲ್ಲಿಯೂ ವರ್ಗಾವಣೆ ಆಗಿದ್ದವು. ಅವರು ದುಡ್ಡು ಪಡೆದಿದ್ದರೆ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಊಹೆ ಮೇಲೆ ಹೇಳಲಾಗುವುದಿಲ್ಲ. ಹೊಸ ಸರ್ಕಾರ ಬಂದಿದೆ. ವರ್ಗಾವಣೆಯನ್ನು ಆಡಳಿದ ಹಿತದೃಷ್ಟಿಯಿಂದ ಮಾಡಬೇಕು. ಮಾರ್ಚ್, ಏಪ್ರಿಲ್ ನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ವರ್ಗಾವಣೆ ಆಗಿರಲಿಲ್ಲ. ಈಗ ಸಾಮಾನ್ಯ ವರ್ಗಾವಣೆಗಳಾಗುತ್ತಿವೆ ಎಂದರು.
ಹೆಚ್.ಡಿ.ಕೆ ಆರೋಪಗಳು ಹಿಟ್ ಅಂಡ್ ರನ್ ಇದ್ದಂತೆ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಡಿಯೋ ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಪಗಳು ಹಿಟ್ ಅಂಡ್ ರನ್ ಇದ್ದಂತೆ. ಅವರು ಮಾಡಿರುವ ಯಾವ ಆರೋಪಗಳನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರೆ? ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಯತೀಂದ್ರ ಅವರ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಮಾತನಾಡಿ ಅವರ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಮನೆ ಮಗ, ಅವರ ಅಣ್ಣ ಸಚಿವರಾಗಿದ್ದವರು, ಅವರ ಪತ್ನಿ ಶಾಸಕರು,ಅವರ ತಂದೆ ಪ್ರಧಾನಿಗಳಾಗಿದ್ದವರು, ಅವರ ಅಣ್ಣನ ಮಕ್ಕಳು ಶಾಸಕರಾಗಿದ್ದಾರಲ್ಲ, ಅವರನ್ನು ಏನಂತ ಕರೆಯಬೇಕು ಎಂದು ಕೇಳಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….