ಒಂದು ಹಳ್ಳಿಯ ಬೆಟ್ಟದ ಮೇಲಿದ್ದ ರಾಕ್ಷಸನೊಬ್ಬ ಆ ಹಳ್ಳಿಯ ಜನರಿಗೆ ಬಹಳ ಕಿರುಕುಳ ಕೊಡುತ್ತಿದ್ದ. ಅವನ ಬಗ್ಗೆ ಜನ ಭಯಭೀತರಾಗಿ ಆತ ಬೆಟ್ಟದಿಂದ ಕೆಳಗಿಳಿದು ಬಂದು ಯಾರಿಗೂ ತೊಂದರೆ ಕೊಡದಿರಲೆಂದು ಅವನಿಗೆ ಬೇಕು ಬೇಕಾದ ಎಲ್ಲಾ ಆಹಾರವನ್ನು ಅವನ ಬಳಿಗೇ ಕಳಿಸಿ ಕೊಡುತ್ತಿದ್ದರು. ಇದು ಸರದಿಯ ಪ್ರಕಾರ ಒಂದೊಂದು ಮನೆಯವರಿಂದ ಪ್ರತಿದಿನ ನಡೆಯುತ್ತಿತ್ತು.
ಆ ಹಳ್ಳಿಯಲ್ಲಿದ್ದ ಶಿವ ಎಂಬ ಬುದ್ಧಿವಂತ ಬಾಲಕ ಈ ರಾಕ್ಷಸನ ಉಪಟಳದಿಂದ ತನ್ನ ಹಳ್ಳಿಯ ಜನರನ್ನು ರಕ್ಷಣೆ ಮಾಡಬೇಕೆಂದು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ. ಒಂದು ದಿನ ರಾಕ್ಷ ಸನಿಗೆ ಆಹಾರ ಕಳಿಸುವ ಸರದಿ ಶಿವ ಮನೆಯವರಿಗೆ ಬಂತು. ಆಗ ಬಾಲಕ ಯಾವುದೇ ಕಾರಣಕ್ಕೂ ಆ ರಾಕ್ಷಸನಿಗೆ ಆಹಾರ ಕೊಡುವುದು ಬೇಡವೆಂದು ತನ್ನ ತಂದೆ ತಾಯಿಗಳಲ್ಲಿ ಪಟ್ಟು ಹಿಡಿದ.
ಹಳ್ಳಿಯ ಜನರಿಗೂ ಇದನ್ನೇ ದೃಢವಾಗಿ ಹೇಳಿದ. ಶಿವನ ಮಾತು ಕೇಳಿ ಹಳ್ಳಿ ಜನರೆಲ್ಲಾ ಬೆಚ್ಚಿ ಬಿದ್ದರು. ಅವರು ಇಷ್ಟೊಂದು ಭಯಪಡುತ್ತಿರುವುದನ್ನು ನೋಡಿ ಆತ ‘ನೀವೆಲ್ಲಾ ಏಕೆ ಆ ರಾಕ್ಷಸನಿಗೆ ಇಷ್ಟೊಂದು ಹೆದರುತ್ತೀರಿ? ಅವನ ವಿರುದ್ಧ ತಿರುಗಿಬಿದ್ದು ಧೈರ್ಯವಾಗಿ ಹೋರಾಡಬಾರದೇಕೆ?’ ಎಂದು ಕೇಳಿದ.
ಇದರಿಂದ ಇನ್ನಷ್ಟು ಭಯಗೊಂಡ ಜನರು ಈ ಹುಡುಗನಿಂದಾಗಿ ನಮಗೆ ಉಳಿಗಾಲವಿಲ್ಲ ಎಂದು ಮನಸ್ಸಿನಲ್ಲೇ ಗೊಣಗಿ ಅವನ ವಿರುದ್ಧವೇ ತಿರುಗಿ ಬಿದ್ದರು. ಶಿವ ಬಾಲಕನಾದರೂ ಹಳ್ಳಿಯ ಜನರಿಗೆ ಕಿಂಚಿತ್ತೂ ಅಂಜದೆ ‘ರಾಕ್ಷಸನ ವಿರುದ್ಧ ತಿರುಗಿ ಬೀಳಿರೆಂದು ನಾನು ಹೇಳಿದರೆ ನೀವು ನನ್ನ ವಿರುದ್ಧವೇ ತಿರುಗಿ ಬೀಳುತ್ತೀರಾ? ಇದೇ ಕೆಲಸವನ್ನು ಆ ರಾಕ್ಷ ಸನ ವಿರುದ್ಧ ಮಾಡಿ. ನಾವೆಲ್ಲಾ ಸಾವಿರಾರು ಜನರಿದ್ದುಕೊಂಡು ಕೇವಲ ಒಬ್ಬ ರಾಕ್ಷಸನನ್ನು ಹೆದರಿಸಲಾಗದೆ? ನಾವು ಒಗ್ಗಟ್ಟಾಗಿ ಒಬ್ಬೊಬ್ಬರೂ ಒಂದು ಕಲ್ಲು ಹೊಡೆದರೆ ಸಾಕು. ಆ ರಾಕ್ಷಸ ನಿರ್ನಾಮವಾಗಿ ಬಿಡುತ್ತಾನೆ. ಎಲ್ಲರೂ ಬನ್ನಿ ನನ್ನ ಜೊತೆ’ ಎನ್ನುತ್ತಲೇ ಅವರನ್ನು ಒಗ್ಗೂಡಿಸಿ ಹುರಿದುಂಬಿಸಿದ.
ಅವನ ಮಾತುಗಳನ್ನು ಗಂಭೀರವಾಗಿ ಕೇಳಿಸಿಕೊಂಡ ಹಳ್ಳಿ ಜನ ಕೊನೆಗೆ ‘ಹೌದು, ನಾವೆಲ್ಲ ಇಷ್ಟೊಂದು ಮಂದಿ ಇದ್ದುಕೊಂಡು ಒಬ್ಬ ರಾಕ್ಷ ಸನಿಗೆ ಹೆದರಿ ತಮ್ಮ ಶ್ರಮದ ದುಡಿಮೆಯನ್ನೆಲ್ಲಾ ಸುಖಾಸುಮ್ಮನೆ ಇಷ್ಟು ದಿನ ಅವನ ಹೊಟ್ಟೆಗೆ ಹಾಕಿದ್ದೇ ತಪ್ಪಾಗಿದೆ. ಈ ತಪ್ಪು ಇನ್ನೂ ಮುಂದುವರಿಯುವುದು ಬೇಡ’ ಎಂದು ನಿರ್ಧರಿಸಿ ತಕ್ಷ ಣವೇ ರಾಕ್ಷಸನನ್ನು ಸದೆಬಡಿಯಲು ಅವನಿರುವ ಬೆಟ್ಟದತ್ತ ಶಿವನ ಜೊತೆ ಒಂದುಗೂಡಿ ನಡೆದರು.
ಪ್ರತಿದಿನ ಹಳ್ಳಿ ಜನ ತನ್ನ ಬಳಿಗೆ ಕಳಿಸುತ್ತಿದ್ದ ಆಹಾರ ಇನ್ನೂ ಬಾರದೆ ಹೋದದ್ದಕ್ಕೆ ಕೆರಳಿ ಕೆಂಡವಾಗಿ, ಕಾದು ಸುಸ್ತಾಗಿ ಹಸಿವಿನಿಂದ ಬಳಲಿದ್ದ ರಾಕ್ಷಸ ಬೆಟ್ಟದಿಂದ ಕೆಳಗಿಳಿದು ಬಂದಿದ್ದ. ಒಮ್ಮೆಗೇ ಅಷ್ಟೊಂದು ಜನರನ್ನು ಕಂಡು ಹೆದರುವ ಸರದಿ ಈಗ ಆತನದ್ದಾಗಿತ್ತು. ರಾಕ್ಷಸ ಸಾವರಿಸಿಕೊಂಡು ಜನರ ಮೇಲೆ ಬೀಳುವಷ್ಟರಲ್ಲಿ ಹಳ್ಳಿಯ ಜನರು ಸ್ವಲ್ಪವೂ ತಡ ಮಾಡದೆ ಒಮ್ಮೆಲೆ ಒಂದೊಂದು ಕಲ್ಲನ್ನು ರಾಕ್ಷಸನತ್ತ ಬೀಸಿದರು.
ಒಂದೇ ಕ್ಷಣದಲ್ಲಿ ಸಾವಿರಾರು ಕಲ್ಲುಗಳ ಏಟಿಗೆ ಸಿಕ್ಕಿ ರಾಕ್ಷಸ ಪ್ರಾಣ ಬಿಟ್ಟ. ಅಂದಿನಿಂದ ಹಳ್ಳಿ ಜನರಿಗೆ ನೆಮ್ಮದಿ ಸಿಕ್ಕಿತು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಿದ ಬಾಲಕ ಶಿವನನ್ನು ಇಡೀ ಹಳ್ಳಿಯ ಜನ ಕೊಂಡಾಡಿದರು. (ಕೃಪೆ ಸಾಮಾಜಿಕ ಜಾಲತಾಣ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….