ದೊಡ್ಡಬಳ್ಳಾಪುರ, (ಜುಲೈ.18): ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಮತ್ತು ತೋಟಗಾರಿಕಾ ಇಲಾಖೆ ಇವರ ಸಹಯೋಗದೊಂದಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ನ 95ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ತಂತ್ರಜ್ಞಾನ ದಿನವನ್ನು ಆಯೋಜಿಸಿದ್ದು, ‘ಟೊಮ್ಯಾಟೋ ಬೆಳೆಯಲ್ಲಿ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ’ ಬಗ್ಗೆ ತರಬೇತಿ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಬಿ.ಜಿ.ಹನುಮಂತರಾಯ ಮತ್ತು ತೋಟಗಾರಿಕಾ ಉಪನಿರ್ದೇಶಕ ಜೆ.ಗುಣವಂತ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಡಾ. ಬಿ.ಜಿ.ಹನುಮಂತರಾಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಟೊಮ್ಯಾಟೋ ಬೆಲೆಯು ಹೆಚ್ಚಾಗಿದ್ದು, ಇದು ರೈತರ ಪಾಲಿಗೆ ಸಂತೋಷದಾಯಕವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಬೆಳೆಗಳಿಗೂ ಉತ್ತಮ ಬೆಲೆ ಪಡೆಯಬೇಕೆಂದು ಆಶಯ ವ್ಯಕ್ತಪಡಿಸಿದರು.
ತೋಟಗಾರಿಕಾ ಉಪನಿರ್ದೇಶಕ ಗುಣವಂತ, ಜೆ. ರವರು ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಟೊಮ್ಯಾಟೋ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಉತ್ತಮ ಇಳುವರಿ ಪಡೆಯುವ ನಿಟ್ಟಿನಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಹಾಗೂ ತೋಟಗಾರಿಕಾ ಇಲಾಖೆಯ ವತಿಯಿಂದ ದೊರಕುವ ಸವಲತ್ತುಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ತರಬೇತಿ ಕಾರ್ಯಕ್ರಮದ ಅಂಗವಾಗಿ ತಾಂತ್ರಿಕ ಸಮಾವೇಶವನ್ನು ಆಯೋಜಿಸಲಾಗಿದ್ದು, ರೈತರಿಗೆ ಟೊಮ್ಯಾಟೋ ಬೆಳೆಯ ಸಮಗ್ರ ಬೇಸಾಯ ಕ್ರಮಗಳ ಬಗ್ಗೆ ತಿಳಿಸಿಕೊಡಲಾಯಿತು.
ಹಿರಿಯ ವಿಜ್ಞಾನಿಗಳಾದ ಡಾ.ಬಿ.ಜಿ.ಹನುಮಂತರಾಯ ಟೊಮ್ಯಟೋ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು.
ಡಾ.ವೀರನಾಗಪ್ಪ, ಪಿ., ‘ಟೊಮ್ಯಾಟೋ ಬೆಳೆಯ ಪೋಷಕಾಂಶ ನಿರ್ವಹಣೆ’ ಬಗ್ಗೆ ವಿವರಿಸಿದರು.
ವಿಜ್ಞಾನಿ ಡಾ.ದರ್ಶಿನಿ, ಜಿ.ಎಂ., ‘ಟೊಮ್ಯಾಟೋ ಬೆಳೆಯಲ್ಲಿ ಕಂಡು ಬರುವ ಕೀಟ ಮತ್ತು ರೋಗ ಲಕ್ಷಣಗಳನ್ನು ಗುರುತಿಸುವಿಕೆ ಮತ್ತು ನಿರ್ವಹಣೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಪ್ರಸ್ತುತ ಟೊಮ್ಯಾಟೋ ಬೆಳೆಯನ್ನು ಹೆಚ್ಚಾಗಿ ಬಾಧಿಸುತ್ತಿರುವ ಎಲೆಮುಟುರು ನಂಜುರೋಗ ಮತ್ತು ಬಿಳಿನೊಣ ಬಾಧೆಯನ್ನು ತಡೆಗಟ್ಟಲು ಅನುಸರಿಸಬೇಕಾದ ಸಮಗ್ರ ಹತೋಟಿ ಕ್ರಮಗಳ ಬಗ್ಗೆ ವಿವರಿಸಿದರು. ತರಬೇತಿಯಲ್ಲಿ ಟೊಮ್ಯಾಟೋ ಬೆಳೆಯಲ್ಲಿ ಕಂಡು ಬರುವ ವಿವಿಧ ಕೀಟ ಮತ್ತು ರೋಗ ಬಾಧಿತ ಮಾದರಿಯನ್ನು ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ಸಹಾಯಕ ತೋಟಗಾರಿಕಾ ಅಧಿಕಾರಿಗಳು ಭಾಗವಹಿಸಿದ್ದರು.
ಒಟ್ಟು 62 ರೈತ ಮತ್ತು ರೈತ ಮಹಿಳೆಯರು ಈ ಕಾರ್ಯಕ್ರಮದ ಪ್ರಯೋಜನ ಪಡೆದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….