ದೊಡ್ಡಬಳ್ಳಾಪುರ, (ಜುಲೈ.25): ಸೋಮವಾರ ನೈರುತ್ಯ ಮುಂಗಾರು ಮಳೆ ಜಡಿಮಳೆಯಾಗಿ ಸುರಿದಿದ್ದು, ಮಂಗಳವಾರವೂ ಮುಂದುವರೆಯುವ ಮೂಲಕ ವ್ಯಾಪಾರ ವಹಿವಾಟು ಹಾಗೂ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.
ಕಳೆದೆರಡು ದಿನಗಳಿಂದ ಇಡೀ ದಿನ ಮೋಡ ಮುಸುಕಿದ ವಾತಾವರಣದೊಂದಿಗೆ ಜಿಟಿ ಜಿಟಿ ಮಳೆಯಾಗುತ್ತಿತ್ತು. 3 ಗಂಟೆ ನಂತರ ಜೋರಾಗಿದ್ದು ಜನ ಮನೆಯಿಂದ ಹೊರಗಡೆ ಬರಲು ಪರದಾಟ ನಡೆಸುವಂತಾಯಿತು.
ತಾಲೂಕಿನಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣದೊಂದಿಗೆ ಸಣ್ಣ ಮಟ್ಟದ ಮಳೆ ಹನಿಗಳು ಒಂದೆ ಸಮ ಸುರಿಯುತ್ತಿದ್ದು ಸಾಮಾನ್ಯವಾಗಿತ್ತು. ಆದರೆ ಮಂಗಳವರ ಹನಿಗಳ ರಭಸ ಜೋರಾಗಿದ್ದು ಇದರ ನಡುವೆಯೇ ಬೆಳಗ್ಗೆ ಶಾಲಾ ಕಾಲೇಜು ಪ್ರಾರಂಭಗೊಂಡರೇ, ಅಂಗಡಿ ಮುಗ್ಗಟ್ಟುಗಳು ಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಿದವು.
ಮದ್ಯಾಹ್ನದ ನಂತರ ಬಿರುಸುಗೊಂಡ ಮಳೆಯಿಂದ ವ್ಯಾಪಾರ ವಹಿವಾಟ ಇಲ್ಲದಾಯಿತು. ಸವಾರರು ಸಂಚಾರಕ್ಕೆ ಪರದಾಡಿದರು. ಸಂಜೆ ನಿರಂತರ ಮಳೆಯಿಂದಾಗಿ ಶಾಲಾ ಮಕ್ಕಳು ಮಳೆಯಲ್ಲಿ ನೆನೆದುಕೊಂಡು ಮನೆ ಸೇರುವಂತಾಯಿತು.
ಸಾರ್ವಜನಿಕರು, ಸಣ್ಣ ಪುಟ್ಟ ವ್ಯಾಪಾರಸ್ಥರು ಮಳೆಗೆ ಹಿಡಿ ಶಾಪ ಹಾಕುತ್ತಿದ್ದರೆ, ರೈತರಲ್ಲಿ ಸಂಭ್ರಮ ಕಂಡುಬಂತು. ತಾಲೂಕಿನಾಧ್ಯಂತ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಎರಡು ದಿನದ ಸತತ ಜಡಿ ಮಳೆ ಜನರನ್ನು ಹೈರಾಣಾಗಿಸಿದೆ.
ಬಿಸಿ ಪದಾರ್ಥಗಳ ಸೇವನೆಗೆ ಮೊರೆ: ಮಳೆಯ ಪ್ರಭಾವದಿಂದಾಗಿ ಎಲ್ಲಡೆ ನೀರು, ತಂಪು ವಾತಾವರಣದಿಂದ ಜನ ಬಿಸಿ ಪದಾರ್ಥಗಳ ಸೇವನೆಗೆ ಮೊರೆ ಹೋಗಿದ್ದು ಕಂಡು ಬಂತು. ಟೀ,ಕಾಪಿ ಹಾಗೂ ಬೋಂಡ, ಬಜ್ಜಿ ಅಂಗಡಿಗಳು, ಪಾನೀಪೂರಿ, ಮಸಾಲೆ ಪೂರಿ ಅಂಗಡಿಗಳ ಮುಂದೆ ಹೆಚ್ಚಿನ ಜನ ಸಂದಣಿ ಕಂಡು ಬಂತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….