ದೊಡ್ಡಬಳ್ಳಾಪುರ, (ಆ.21): ರಾಜ್ಯದಲ್ಲೇ ಮಾದರಿ ಹೂವಿನ ಮಾರುಕಟ್ಟೆಯಾಗಿ ಅಭಿವೃದ್ಧಿ ಹೊಂದುವ ಮುನ್ಸೂಚನೆಗಳು ಇವೆ. ತಾಲ್ಲೂಕಿನ ಎಲ್ಲಾ ಹೂವು ಬರೆಳೆಗಾರರು ಎಪಿಎಂಸಿಯಲ್ಲಿ ಪ್ರಾರಂಭವಾಗಿರುವ ಹೂವಿನ ಮಾರುಕಟ್ಟೆಯ ಹರಾಜಿನಲ್ಲೇ ಭಾಗವಹಿಸುವ ಮೂಲಕ ಸ್ಪರ್ಧಾತ್ಮಕ ಬೆಲೆ ಪಡೆಯಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ ಹೇಳಿದರು.
ಅವರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರದಿಂದ ನೂತನವಾಗಿ ಹೂವು ಬೆಳೆಗಾರರು ಹಾಗೂ ಹೂವು ಮಾರಾಟ ವರ್ತಕರ ವೇದಿಕೆ ವತಿಯಿಂದ ಪ್ರಾರಂಭವಾಗಿರುವ ಹೂವು ಮಾರುಕಟ್ಟೆ ಹರಾಜು ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕಿನಲ್ಲಿ ಬೆಳೆಯಲಾಗುತ್ತಿರುವ ಹೂವು ದೇಶದ ನಾನಾ ರಾಜ್ಯಗಳು ಸೇರಿದಂತೆ ವಿಶ್ವದ ಅನೇಕ ದೇಶಗಳಿಗೆ ಬೇರೆಡೆಯ ಮಾರುಕಟ್ಟೆಗಳ ಹರಾಜಿನ ಮೂಲಕ ರಫ್ತಾಗುತ್ತಿವೆ. ದೇವನಹಳ್ಳಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿನ ಎಪಿಎಂಸಿಗೆ ಸಮೀಪವೇ ಇರುವುದರಿಂದ ಹೂವು ಮಾರುಕಟ್ಟೆ ಅಭಿವೃದ್ದಿಗೆ ಸಹಕಾರಿಯಾಗಲಿದೆ.
ಭವಿಷ್ಯದಲ್ಲಿ ಹೂವಿನ ಮಾರುಕಟ್ಟೆ ಮತ್ತಷ್ಟು ವಿಸ್ತಾರವಾಗಿ ಬೆಳೆಯಲು ಎಲ್ಲಾ ರೈತರ ಸಹಕಾರ ಮುಖ್ಯವಾಗಿದೆ. ಇಷ್ಟು ವರ್ಷಗಳಿಂದ ಯಾರೋ ಎಲ್ಲಿಯೋ ಕುಳಿತು ನಿಗದಿ ಮಾಡುತ್ತಿದ್ದ ಬೆಲೆಗೆ ನಮ್ಮ ಹೂವು ಮಾರಾಟ ಮಾಡುವ ವ್ಯವಸ್ಥೇ ಇತ್ತು. ಇಂದಿನಿಂದ ನಮ್ಮ ಹೂವಿನ ಗುಣಮಟ್ಟಕ್ಕೆ ಅನುಗುಣವಾಗಿ ಸ್ಥಳದಲ್ಲೇ ಬಹಿರಂಗ ಹರಾಜಿನ ಮೂಲಕ ಬೆಲೆ ನಿರ್ಣಯವಾಗಲಿದೆ. ಪ್ರಾರಂಭದಲ್ಲಿ ಗ್ರಾಹಕರ ಕೊರತೆಯಿಂದಾಗಿ ಬೆಲೆ ಕಡಿಮೆಯಾಗಬಹುದು. ಆದರೆ ಭವಿಷ್ಯದಲ್ಲಿ ಹೂವು ಬೆಳೆಗಾರರಿಗೆ ಉತ್ತಮ ಬೆಲೆ, ಸೌಲಭ್ಯಗಳು ದೊರೆಯಲಿವೆ ಎಂದರು.
ರೈತರು ಬೆಳೆಗಾರರಾಗಿಯಷ್ಟೇ ಉಳಿಯದೆ ಮಾರಾಟಗಾರರು ಆದಾಗ ಮಾತ್ರ ಗ್ರಾಹಕರಿಗೆ ಕಡಿಮೆ ದರದಲ್ಲಿ ಹೂವು, ಹಣ್ಣು ಹಾಗೂ ತರಕಾರಿ ದೊರೆಯುವಂತೆ ಆಗಲಿದೆ. ಈ ದಿಸೆಯಲ್ಲಿ ರೈತರು ಹೂವುಗಳನ್ನು ತಾವೇ ಮಾರಾಟ ಮಾಡಲು ಅಗತ್ಯ ಇರುವ ಸ್ಥಳ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ದೊರೆತಿದೆ. ಒಗ್ಗಟ್ಟಿನಿಂದ ರೈತರು ಸೂಕ್ತ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ದಲ್ಲಾಳಿಗಳ ಹಾವಳಿಯಿಂದ ಬಿಡುಗಡೆ ಹೊಂದಲು ಸಾಧ್ಯವಾಗಲಿದೆ ಎಂದರು.
ಹೂವು ಮಾರಾಟಗಾರ ಕೆ.ಆರ್.ಅಶ್ವತ್ಥ್ ಮಾತನಾಡಿ, ಹೂವು ಬೆಳೆಗಾರರು ಉಳಿದರೆ ಮಾತ್ರ ವರ್ತಕರು ಜೀವನ ನಡೆಸಲು ಸಾಧ್ಯ. ಇಷ್ಟು ದಿನಗಳ ಕಾಲ ನಗರದ ಹೃದಯಭಾಗದಲ್ಲಿ ಕಾರ್ಯನಿರ್ವಹಿಸುತ್ತ ಹೂವಿನ ಮಾರುಕಟ್ಟೆ ಈಗ ಬೆಳೆದಿರುವ ಜನ ಸಂಖ್ಯೆ, ಹೂವು ಬೆಳೆಗಾರರ ಸಂಖ್ಯೆಗೆ ತಕ್ಕಷ್ಟು ವಿಸ್ತಾರವಾಗಿ ಇಲ್ಲ. ಎಪಿಎಂಸಿ ಆವರಣದಲ್ಲಿ ಹೂವು ಮಾರಾಟಕ್ಕೆ ಪ್ರತ್ಯೇಕ ಮಾರುಕಟ್ಟೆ ಪ್ರಾರಂಭವಾಗಿರುವುದು ಸ್ವಾಗತಾರ್ಹ. ಇಲ್ಲಿ ಹೂವು ಮಾರಾಟವಾಗದೇ ಉಳಿದರೆ ರೈತರು ಭಯಪಡದೆ ಬೆಂಗಳೂರಿಗೆ ಕಳುಹಿಸಿಕೊಡಿ ನಾನು ಮಾರಾಟ ಮಾಡಿಕೊಡುತ್ತೇನೆ. ಆದರೆ ನಮ್ಮೂರಿನ ಎಪಿಎಂಸಿಯಲ್ಲಿ ಹೂವು ಮಾರುಕಟ್ಟೆ ಅಭಿವೃದ್ಧಿಗೆ ಮಾರಾಟಗಾರರಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಪರಿಸರವಾದಿ ಕೆ.ಗುರುದೇವ್ ಮಾತನಾಡಿ, ರೈತರು ಹಾಗೂ ಕೃಷಿಗೆ ಹೆಚ್ಚಿನ ಮಾನ್ಯತೆ ದೊರೆಯುವ ದಿನಗಳು ಶೀಘ್ರದಲ್ಲೇ ಬರಲಿವೆ. ರೈತರು ಎದೆಗುಂದೆ ತಾವು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ತಲುಪವಂತೆ ಮಾಡುವ ವಿಧಾನಗಳ ಕಡೆಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.
ಉದ್ಘಾಟ ಸಮಾರಂಭದಲ್ಲಿ ರಾಜ್ಯ ರೈತ ಸಂಘಧ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್, ಮುಖಂಡರಾದ ಪ್ರಕಾಶ್, ಹನುಮಂತರಾಯಪ್ಪ, ರುದ್ರೇಶ್, ವಾಸು, ಶಿವರಾಜ್, ಉಮಾದೇವಿ, ಮಹಾದೇವ್, ಸಿದ್ದಲಿಂಗಪ್ಪ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….