ಗ್ರಾಮ ಪಂಚಾಯತಿ ಮಾಜಿ ಸದಸ್ಯನ ಬರ್ಬರ ಹತ್ಯೆ..!: ಆರೋಪಿಯ ಸಂಬಂಧಿಕರ ಮನೆ ಮೇಲೆ ಕಲ್ಲು ತೂರಾಟ

ಚಿಕ್ಕಬಳ್ಳಾಪುರ, (ಆ‌26): ಕಾಂಗ್ರೆಸ್ ಮುಖಂಡ ಹಾಗೂ ಗ್ರಾಮ ಪಂಚಾಯತಿ ಮಾಜಿ ಸದಸ್ಯನನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಿಡ್ಲಘಟ ತಾಲ್ಲೂಕಿನ ಬೈರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬೈರಗಾನಹಳ್ಳಿ ಗ್ರಾಮದ ನಿವಾಸಿ ನಾರಾಯಣಸ್ವಾಮಿ ಕೊಲೆಯಾದ ವ್ಯಕ್ತಿ.

ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮತ್ತು ದಲಿತ ನಾಯಕ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ ನಾರಾಯಣಸ್ವಾಮಿ, ರಿಯಲ್ ಎಸ್ಟೆಟ್ ಹಾಗೂ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿ ಕೊಂಡಿದ್ದರು. 

ಕಾರ್ಯ ನಿಮಿತ್ತ ಶಿಡ್ಲಘಟ್ಟ ನಗರಕ್ಕೆ ಹೋಗಿ, ವಾಪಸ್ಸು ಸ್ವಗ್ರಾಮ ಬೈರನಾಯಕನಹಳ್ಳಿ ಗ್ರಾಮಕ್ಕೆ ತನ್ನ ಮಾರುತಿ  ಓಮಿನಿ ವ್ಯಾನ್‌ನಲ್ಲಿ ಹೊರಟಿದ್ದರು. ಗ್ರಾಮದ ಹೊರವಲಯ ತಲುಪುವ ವೇಳೆಗೆ ನಾರಾಯಣ ಸ್ವಾಮಿ ಮೊಬೈಲ್‌ಗೆ ಕೆರೆ ಬಂದಿದ್ದು, ಕಾರು ನಿಲ್ಲಿಸಿ ಪೋನಿನಲ್ಲಿ ಮಾತನಾಡುತ್ತಿದ್ದಾಗ, ಕಾರಿನ ಹಿಂದಿನಿಂದ ಬಂದ ದುಷ್ಕರ್ಮಿಗಳು ಕಣ್ಣಿಗೆ ಖಾರದಪುಡಿ ಎರೆಚಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಆಗ ಕಾರಿನಿಂದ ಇಳಿದು ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ನಾರಾಯಣಸ್ವಾಮಿಯನ್ನು ಅಟ್ಟಾಡಿಸಿ ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ಮಾದ್ಯಮಗಳಿಗೆ ತಿಳಿಸಿವೆ.

ಕೊಲೆಗೆ ಹಳೆ ವೈಷಮ್ಯ ಕಾರಣವಾಯಿತಾ: ನಾರಾಯಣಸ್ವಾಮಿಯ ಸಂಬಂಧಿ ದೇವರಾಜು ಪತ್ನಿ ಮಂಜುಳ ಎನ್ನುವವರು ಸಾದಹಳ್ಳಿ ಗ್ರಾಮದ ವಾಸಿ ಪ್ರಮೋದ್ ಎನ್ನುವವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ಇತ್ತೀಚಿಗೆ ಕೆಲಸಕ್ಕೆ ಹೋಗುತ್ತಿರಲಿಲ್ಲವಂತೆ. ಇದರಿಂದ ಪ್ರಮೋದ್ ಮಂಜುಳರವರ ಮನೆ ಬಳಿ ಆಗಮಿಸಿ ಗಲಾಟೆ ಮಾಡಿದ್ದನಂತೆ. 

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾರಾಯಣಸ್ವಾಮಿ ಪ್ರಮೋದ್‌ಗೆ ಬುದ್ಧಿ ಹೇಳಿ ಆತನ ವಿರುದ್ಧ ದಿಬ್ಬೂರಹಳ್ಳಿ ಪೊಲೀಸ್‌ಠಾಣೆಗೆ ದೂರು ಕೊಡಿಸಿದ್ದರಂತೆ. ಪೊಲೀಸರು ರಾಜಿ-ಪಂಚಾಯ್ತಿ ಮಾಡಿ ಕಳುಹಿಸಿದ್ದರು. 

ಆಗ ಪ್ರಮೋದ್ ನಾರಾಯಣಸ್ವಾಮಿಗೆ ಅವಾಜ್ ಹಾಕಿ, ಕೊಲೆ ಬೆದರಿಕೆ ಹಾಕಿದ್ದನಂತೆ. ಅದೇ ವಿಚಾರದಲ್ಲಿ ಪ್ರಮೋದ್ ಮತ್ತು ಆತನ ಸಂಗಡಿಗರು ಕೊಲೆ ಮಾಡಿದ್ದಾರೆಂದು ದೂರು ನೀಡಲಾಗಿದೆ.

ಇಬ್ಬರು ಆರೋಪಿಗಳ ಬಂಧನ:  ನಾರಾಯಣಸ್ವಾಮಿ ಕೊಲೆ ಪ್ರಕರಣದಲ್ಲಿ ದಿಬ್ಬೂರಹಳ್ಳಿ ಠಾಣೆಯ  ಪೊಲೀಸರು ಪ್ರಮೋದ್ ಹಾಗೂ ಆತನ ಸಹಚರ ವೇಣು ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. 

ಆರೋಪಿ ಸಂಬಂಧಿ ಮನೆಯ ಮೇಲೆ ಕಲ್ಲು ತೂರಾಟ: ಇನ್ನು ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮೋದ್‌ನ ದೊಡ್ಡಮ್ಮನ ಮಗ ಮಂಜುನಾಥ್ ಮನೆ ಭೈರಗಾನಹಳ್ಳಿ ಗ್ರಾಮದಲ್ಲಿದೆ. ಆದರೆ ಪ್ರಮೋದ್ ಮನೆ ಸಾದಹಳ್ಳಿಯಿದೆ. ನಾರಾಯಣ ಸ್ವಾಮಿ ಕೊಲೆಯಲ್ಲಿ  ಮಂಜುನಾಥ್ ಪಾತ್ರವೂ ಇದೆ ಎಂದು ಮೃತ ನಾರಾಯಣಸ್ವಾಮಿ ಸಂಬಂಧಿರು ಮಂಜುನಾಥ್ ಮನೆ ಮೇಲೆ  ಶುಕ್ರವಾರ  ಕಲ್ಲು ತೂರಾಟ ಮಾಡಿದ್ದು, ಮನೆಯ ಕಿಟಕಿ, ಗಾಜುಗಳನ್ನು ಹೊಡೆದುಹಾಕಿದ್ದಾರೆ.

ಇದರಿಂದ ಗ್ರಾಮದಲ್ಲಿ ಉದ್ವಿಗ್ಧ ಪರಿಸ್ಥಿತಿ ಉಂಟಾಗಿದ್ದು, 04 ಜನ ಸಿಪಿಐ, ಡಿಎಆರ್, ಕೆಎಸ್‌ಆರ್‌ಪಿ ಸೇರಿದಂತೆ ನೂರಾರು ಜನ ಪೊಲೀಸರನ್ನು ಬಂದೋಬಸ್ತಿಗೆ ನಿಯೋಜಿಸಲಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….