ದೊಡ್ಡಬಳ್ಳಾಪುರ, (ಆ.30): ಗಣೇಶ ಮೂರ್ತಿ ತಯಾರಕರಿಗೆ ಹಾಗೂ ಗಣೇಶ ಪ್ರತಿಷ್ಠಾಪಿಸುವ ಸಂಘಗಳಿಗೆ ನಗರ ಸಭೆಯಿಂದ ಅನುಮತಿ ನೀಡುವಾಗ ನೀರಿನಲ್ಲಿ ಕರಗುವ ಜೇಡಿಮಣ್ಣು ಮತ್ತು ನೈಸರ್ಗಿಕವಾಗಿ ನೀರಿನಲ್ಲಿ ಕರಗುವ ಬಣ್ಣಗಳನ್ನು ಮಾತ್ರ ಉಪಯೋಗಿಸಿ ತಯಾರಿಸಿರುವ ಮೂರ್ತಿಗಳಿಗೆ ಮಾತ್ರ ಅನುಮತಿ ನೀಡಬೇಕು. ಉಲ್ಲಂಘಿಸಿದವರ ಮೇಲೆ ಜಲಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆಯನ್ವಯ ಕ್ರಮ ಜರುಗಿಸಬೇಕಿದೆ ಎಂದು ಒತ್ತಾಯಿಸಿ, ಇಲ್ಲಿನ ಯುವ ಸಂಚಲನ ವತಿಯಿಂದ ನಗರಸಭೆ ಪೌರಾಯುಕ್ತ ಕೆ.ಪರಮೇಶ್ ಗೆ ಮನವಿ ಪತ್ರ ಸಲ್ಲಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಯುವ ಸಂಚಲನ ಅಧ್ಯಕ್ಷ ಚಿದಾನಂದ್, ಏಕಾಶಿಪುರ ರಾಜಣ್ಣ ನಾಗರಾಜ್, ಗಣೇಶ ಮೂರ್ತಿಗಳನ್ನು ತಯಾರಿಸುವಾಗ ಹುಲ್ಲು ಮತ್ತು ಬಿದಿರುಕಡ್ಡಿಗಳನ್ನು ಬಳಕೆ ಮಾಡುವಂತಿಲ್ಲ. ಆದರೆ ವಾಸ್ತವದಲ್ಲಿ ಈ ಷರತ್ತುಗಳು ಸಂಪೂರ್ಣ ಪಾಲನೆಯಾಗುತ್ತಿಲ್ಲ. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ನಿಷೇಧವಿದ್ದರೂ ಬಹಳಷ್ಟು ಮಂದಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶಗಳನ್ನು ಬೇರೆ ಊರುಗಳಿಂದ ತಂದು ಇಲ್ಲಿ ಕೂಡಿಸಿ ಕೆರೆ, ಕಲ್ಯಾಣಿಗಳಲ್ಲಿ ವಿಸರ್ಜಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಸೂಚನೆಯಂತೆ ಕೆರೆಗಳಲ್ಲಿ ಹಾಗೂ ಇತರೆ ಯಾವುದೇ ಜಲಮೂಲಗಳಲ್ಲಿ ಬಣ್ಣ ಲೇಪಿತ ವಿಗ್ರಹಗಳನ್ನು ವಿಸರ್ಜಿಸುವಂತಿಲ್ಲ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ 1974ರ ಕಲಂ 45-1 ಅನ್ವಯ ದಂಡವನ್ನು ವಿಸುವ ಅವಕಾಶವಿದೆ. ಅಲ್ಲದೆ ಈ ವರ್ಷ ಕಡ್ಡಾಯವಾಗಿ ಗಣೇಶ ಮೂರ್ತಿಗಳು 5 ಅಡಿ ಎತ್ತರವನ್ನು ಮೀರಬಾರದೆಂದು ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಬಂಧ ವಿಧಿಸಿದೆ. ಈ ಎಲ್ಲಾ ಆದೇಶಗಳ ಕಟ್ಟುನಿಟ್ಟಿನ ಪಾಲನೆಗೆ ನಗರಸಭೆಯ ಪರಿಸರ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದರು.
ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿಯಲ್ಲಿದ್ದರೂ ಅವುಗಳ ಉಲ್ಲಂಘನೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ನಗರಸಭೆ ವತಿಯಿಂದ ವೈಫಲ್ಯತೆ ಎದ್ದು ಕಾಣುತ್ತಿದೆ. ಎಲ್ಲೆಂದರಲ್ಲಿ ದೊಡ್ಡ ಗಣೇಶನ ಮೂರ್ತಿಗಳನ್ನು ಕೂರಿಸುವುದು, ಪ್ಲಾಸ್ಟಿಕ್ ಬ್ಯಾನರ್‌ಗಳನ್ನು ವಿಪರೀತವಾಗಿ ಬಳಸುವುದು, ಧ್ವನಿವರ್ಧಕಗಳ ಬಳಕೆ, ಪಟಾಕಿಗಳ ಬಳಕೆ, ವಿಷಕಾರಿ ಬಣ್ಣಗಳನ್ನು ಬಳಸಿದ ಗಣೇಶ, ಬಿದಿರು ಹುಲ್ಲಿನ ಗಣೇಶ ಹಾಗೂ ಪಿಒಪಿ ಗಣೇಶಗಳ ಹಾವಳಿ ನಡೆಯುತ್ತಲೇ ಇದೆ.
ಈ ವರ್ಷ ದೊಡ್ಡಬಳ್ಳಾಪುರದಲ್ಲಿ ಪರಿಸರ ಮಾಲಿನ್ಯಕಾರಕ ಗಣೇಶಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿ ಸಾಂಪ್ರದಾಯಿಕ ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಲ್ಲಿ ಊರಿನ ನೆಲ, ಜಲಗಳ ಸಂರಕ್ಷಣೆಯಲ್ಲಿ ನಗರಸಭೆ ಪ್ರಮುಖ ಪಾತ್ರವಹಿಸುವ ಮೂಲಕ ಮಾದರಿಯಾಗಬೇಕಿದೆ ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….