ತಿಮ್ಮಣ್ಣನೆಂಬ ಪಂಡಿತನಿದ್ದನು. ತಾನು ಖ್ಯಾತ ಪಂಡಿತನೆಂಬ ‘ಅಹಂ’ ಆತನ ತಲೆಗೇರಿತ್ತು. ಅವನು ತನ್ನ ಹಿರಿಮೆಗಾಗಿ ಸದಾ ಹಂಬಲಿಸುತ್ತಿದ್ದನು. ತನ್ನ ಖ್ಯಾತಿ ಹರಡುವಂತೆ ಪ್ರಚಾರ ಮಾಡುತ್ತಿದ್ದನು. ಸಮಾರಂಭಗಳಲ್ಲಿ ಸಂಘಟಕರು, ‘ಮೇಲೆ ಬನ್ನಿ’ ಎಂದು ತಿಮ್ಮಣ್ಣನನ್ನು ಕರೆಯದಿದ್ದರೂ ತಾನೇ ವೇದಿಕೆಯೇರಿ ಖುರ್ಚಿಯ ಮೇಲೆ ಕುಳಿತುಕೊಳ್ಳುತ್ತಿದ್ದನು. ಇದರಿಂದ ತನ್ನ ಪ್ರತಿಷ್ಠೆ ಹೆಚ್ಚುವುದೆಂದು ತಿಳಿದುಕೊಂಡಿದ್ದನು.
ವೇದಿಕೆಗೆ ಅವನನ್ನು ಕರೆಯದಿದ್ದರೆ ಸಂಘಟಕರ ಜೊತೆಗೆ ಜಗಳ ಮಾಡುತ್ತಿದ್ದನು. ತನ್ನಂತೆ ಎಲ್ಲರೂ ವೇದಿಕೆಯ ಮೇಲೆ ಕುಳಿತುಕೊಂಡರೆ ಬಂದ ಅತಿಥಿಗಳು ಕುರ್ಚಿಗಾಗಿ ಪರದಾಡಬೇಕಾಗುತ್ತದೆಂಬ ಅರಿವು ಅವನಿಗಿರಲಿಲ್ಲ. ದೊಡ್ಡವರ ಪಕ್ಕದಲ್ಲಿ ಕುಳಿತುಕೊಳ್ಳಲು ಏನಾದರೊಂದು ಉಪಾಯ ಮಾಡುತ್ತಿದ್ದನು.
ತಿಮ್ಮಣ್ಣನು ಆಹ್ವಾನಿತ ಗಣ್ಯರ ಕೈಹಿಡಿದುಕೊಂಡು ವೇದಿಕೆಯೇರುತ್ತಿದ್ದನು. ಇಲ್ಲವೆ ತಾನೇ ಅವರೊಂದಿಗೆ ವೇದಿಕೆಯೇರಿ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಿದ್ದನು. ವೇದಿಕೆಯ ಕೆಳಗೆ ಕುಳಿತುಕೊಂಡಿದ್ದರೂ ಭಾವಚಿತ್ರ ತೆಗೆಯುವ ಸಂದರ್ಭದಲ್ಲಿ ಪ್ರಶಸ್ತಿಪತ್ರ ಸ್ಮರಣಿಕೆಗಳನ್ನು ಕೊಡುವ ನೆಪದಲ್ಲಿ ತನ್ನ ಭಾವಚಿತ್ರ ಮೂಡುವಂತೆ ಪ್ರಯತ್ನಿಸುತ್ತಿದ್ದನು.
ತಿಮ್ಮಣ್ಣನು ‘ವಾಗ್ಮಿ’ ಎಂದು ಕರೆಸಿಕೊಳ್ಳಲು ಭಾಷಣ ಮಾಡುವ ಅವಕಾಶ ಪಡೆಯುತ್ತಿದ್ದನು. ಅವನು ‘ಸಮಯಪ್ರಜ್ಞೆ’ ಇಲ್ಲದೆ ಜನರ ಕಿವಿಕೊರೆಯುತ್ತಿದ್ದನು. ಸಂಬಂಧವಿಲ್ಲದ ವಿಷಯ ಮಾತನಾಡಿ ಪ್ರೇಕ್ಷ ಕರಿಗೆ ಬೇಸರವಾಗುವಂತೆ ಮಾಡುತ್ತಿದ್ದನು. ವಿಷಯಕ್ಕಿಂತ ತನ್ನ ಬಗೆಗೇ ಹೆಚ್ಚು ಹೇಳುತ್ತ ಪೌರುಷ ಕೊಚ್ಚಿಕೊಳ್ಳುತ್ತಿದ್ದನು. ‘ಭಾಷಣ ನಿಲ್ಲಿಸಿ’ ಎಂದು ಚಿಕ್ಕ ಚೀಟಿ ಕೊಟ್ಟರೂ ತನ್ನ ಭಾಷಣ ಮುಗಿಸುತ್ತಿರಲಿಲ್ಲ. ಅವನು ಮಹಾಪಂಡಿತನೆಂದು ಬೀಗುತ್ತಿರುವುದು ಎಲ್ಲರಿಗೂ ಗೊತ್ತಾಗಿತ್ತು. ಅವನಲ್ಲಿ ಸ್ವಲ್ಪವೂ ಗಾಂಭೀರ್ಯ ಇರಲಿಲ್ಲ. ಸದಾ ತನ್ನ ದೊಡ್ಡಸ್ತಿಕೆಯನ್ನು ಬಯಸುತ್ತಿದ್ದನು. ತಿಮ್ಮಣ್ಣನೆಂದರೆ ಪ್ರಚಾರಪ್ರಿಯ, ಸನ್ಮಾನಪ್ರಿಯ, ಕುರ್ಚಿಪ್ರಿಯ ಎಂದು ಹೆಸರಾದನು.
ಮನುಷ್ಯನಿಗೆ ಘನತೆ, ಗೌರವಗಳು ತಾನಾಗಿಯೇ ದೊರೆಯಬೇಕು. ಅವು ಬಯಸಿ ಪಡೆಯುವಂತಹವಲ್ಲ. ಆದರೆ, ತಿಮ್ಮಣ್ಣ ಅವಕ್ಕಾಗಿ ಹಂಬಲಿಸಿ ತಾನೇ ಶ್ರೇಷ್ಠ ಪಂಡಿತನೆಂದು ಬೀಗುತ್ತಿದ್ದನು. ಪ್ರತಿಷ್ಠೆಗಾಗಿ ಜಂಭ ಕೊಚ್ಚುವುದೇ ತಿಮ್ಮಣ್ಣನ ದಿನಚರಿಯಾಗಿತ್ತು.
ಹೀಗಿರುವಾಗ ಉದಯಪುರದ ಯುವಕರು, ತಿಮ್ಮಣ್ಣನ ‘ಕುರ್ಚಿಯ ಮೋಹ’ ಬಿಡಿಸಲು ಯೋಜನೆಯೊಂದನ್ನು ಮಾಡಿದರು. ಯುವಕರು ಅಂದಿನ ಸಮಾರಂಭದಲ್ಲಿ ವೇದಿಕೆಯ ಮೇಲೆ ಐದು ಕುರ್ಚಿಗಳನ್ನು ಇಟ್ಟರು. ಸನ್ಮಾನ್ಯರು ಬರುವ ಮೊದಲೇ ತಿಮ್ಮಣ್ಣನು ಒಂದು ಕುರ್ಚಿಯ ಮೇಲೆ ಕುಳಿತುಕೊಂಡ. ಉಳಿದವುಗಳ ಮೇಲೆ ಕಾಲೇಜು ವಿದ್ಯಾರ್ಥಿಗಳು ಕುಳಿತುಕೊಂಡರು.
ಅತಿಥಿಗಳಿಗೆ ಕುರ್ಚಿಗಳೇ ಇರಲಿಲ್ಲ. ಕಾರ್ಯಕ್ರಮ ನಿರೂಪಕನು ಧ್ವನಿವರ್ಧಕದಲ್ಲಿ ‘ಪ್ರತಿಯೊಂದು ಕುರ್ಚಿಗೆ ಚೀಟಿ ಅಂಟಿಸಿದೆ, ತಮ್ಮ ಹೆಸರನ್ನು ನೋಡಿಕೊಂಡು ಕುರ್ಚಿಯ ಮೇಲೆ ಕುಳಿತುಕೊಳ್ಳಬೇಕು. ಉಳಿದವರು ವೇದಿಕೆಯಿಂದ ಕೆಳಗಿಳಿದು ಬರಬೇಕು’ ಎಂದು ಐದಾರು ಸಲ ಹೇಳಿದನು. ಕಾಲೇಜು ವಿದ್ಯಾರ್ಥಿಗಳು ಕುರ್ಚಿ ಬಿಟ್ಟು ಕೆಳಗಿಳಿದು ಬಂದು ಕುಳಿತುಕೊಂಡರು. ತಿಮ್ಮಣ್ಣನು ತನ್ನ ಹೆಸರು ಇದ್ದೇ ಇರುತ್ತದೆ ಎಂಬ ದೃಢನಂಬುಗೆಯಿಂದ ಕುಳಿತುಕೊಂಡನು. ಆದರೂ ಒಮ್ಮೆ ನೋಡೋಣವೆಂದು ಕುರ್ಚಿಯತ್ತ ಕಣ್ಣು ಹಾಯಿಸಿದನು. ಯಾವ ಕುರ್ಚಿಗೂ ತಿಮ್ಮಣ್ಣನ ಹೆಸರಿನ ಚೀಟಿ ಅಂಟಿಸಿರಲಿಲ್ಲ ಅನಿವಾರ್ಯವಾಗಿ ತಿಮ್ಮಣ್ಣನು ಅವಮಾನದಿಂದ ಕೆಳಗಿಳಿದು ಬಂದು ಕುಳಿತುಕೊಂಡನು.
ಸೇರಿದ ಜನರು ತಿಮ್ಮಣ್ಣ ಪಂಡಿತನಿಗೆ ಬುದ್ಧ ಕಲಿಸಿದ್ದಕ್ಕಾಗಿ ಕರತಾಡನದ ಮೂಲಕ ತಮ್ಮ ಸಂತೋಷವ್ಯಕ್ತಪಡಿಸಿದರು. ಅಂದಿನಿಂದ ತಿಮ್ಮಣ್ಣನು ಕರೆಯದೇ ವೇದಿಕೆಯೇರಿ ಎಂದೂ ಕುರ್ಚಿ ಮೇಲೆ ಕುಳಿತುಕೊಳ್ಳಲಿಲ್ಲ ಮತ್ತು ತನ್ನ ಕುರ್ಚಿಯ ಮೋಹವನ್ನು, ಜಂಭ ಕೊಚ್ಚುವುದನ್ನು ಬಿಟ್ಟುಬಿಟ್ಟನು. ‘ಪ್ರತಿಷ್ಠೆ’ ಬಯಸಿದರೆ ಅವಮಾನಿತರಾಗಬೇಕು, ಅಪಾಯಗಳಿಗೆ ಸಿಲುಕಬೇಕಾಗುವುದೆಂಬುದನ್ನು ಪಂಡಿತ ತಿಮ್ಮಣ್ಣ ತಿಳಿದುಕೊಂಡನು. ಯುವಕರು, ತಮ್ಮ ಯೋಜನೆ ಯಶಸ್ವಿಯಾದುದಕ್ಕಾಗಿ ಬಹಳ ಸಂತೋಷಪಟ್ಟರು.
ಕೃಪೆ ಸಾಮಾಜಿಕ ಜಾಲತಾಣ: ಎಂ.ಎಂ.ಸಂಗಣ್ಣವರ್
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….