ನಾಗ್ಪುರ, (ಸೆ.08): ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಹೇಳಿದ್ದಾರೆ, ಆರ್‌ಎಸ್‌ಎಸ್ ಸಂಘಟನೆಯು “ಸಂವಿಧಾನದಲ್ಲಿ ಒದಗಿಸಲಾದ ಮೀಸಲಾತಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ” ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನಮ್ಮ ಜೊತೆಯಲ್ಲೇ ಬದುಕುತ್ತಿರುವವರನ್ನು ಸಾಮಾಜಿಕ ವ್ಯವಸ್ಥೆಯ ಕೊನೆಯಲ್ಲಿ ಇರಿಸಿದ್ದೇವೆ. ಅವರ ಕುರಿತು ನಾವು ಕಾಳಜಿ ತೋರಿಲ್ಲ. ಇದು ಎರಡು ಸಾವಿರ ವರ್ಷದಿಂದ ನಡೆದು ಬಂದಿದೆ. ಅವರಿಗೆ ನಾವು ಸಮಾನತೆ ನೀಡುವವರೆಗೆ ವಿಶೇಷವಾದ ಪರಿಹಾರಗಳನ್ನು ನೀಡಬೇಕು. ಮೀಸಲಾತಿಯು ಅಂಥ ಪರಿಹಾರಗಳಲ್ಲಿ ಒಂದಾಗಿದೆ. ಸಂವಿಧಾನ ನೀಡಿರುವ ಮೀಸಲಾತಿಗೆ ಆರ್‌ಎಸ್‌ಎಸ್ ಬೆಂಬಲ ನೀಡಲಿದೆ’ ಎಂದು ಹೇಳಿದರು.
‘ಮೀಸಲಾತಿಯೆಂದರೆ ಕೇವಲ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಮಾನತೆ ನೀಡುವುದಲ್ಲ. ಬದಲಾಗಿ, ಅದು ಒಬ್ಬ ವ್ಯಕ್ತಿಗೆ ಗೌರವ ನೀಡುವುದಕ್ಕೆ ಸಂಬಂಧಿಸಿದ್ದು. ಸಮಾಜದ ಕೆಲ ವರ್ಗಗಳು 2,000 ವರ್ಷಗಳಿಂದ ತಾರತಮ್ಯ ಅನುಭವಿಸುತ್ತಿವೆ ಎಂದಾದರೆ, ನಾವು (ತಾರತಮ್ಯ ಅನುಭವಿಸದೇ ಇರುವವರು) ಏಕೆ 200 ವರ್ಷಗಳ ಕಾಲ ಕೆಲ ತೊಂದರೆಗಳನ್ನು ಅನುಭವಿಸಬಾರದು’ ಎಂದು ಪ್ರಶ್ನಿಸಿದ್ದಾರೆ
ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯವು ಮೀಸಲಾತಿ ಆಗ್ರಹಿಸಿ ತನ್ನ ಹೋರಾಟವನ್ನು ತೀವ್ರಗೊಳಿಸಿದ ಬೆನ್ನಲ್ಲೇ ಭಾಗವತ್ ಅವರು ಹೀಗೆ ಹೇಳಿದ್ದಾರೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….