ಬೆಂಗಳೂರು, (ಸೆ.08): ಇಂಡಿಯಾ ಮರು ನಾಮಕರಣ ಪರ – ವಿರೋಧದ ಚರ್ಚೆ ತೀವ್ರವಾಗಿದೆ. ಈ ಕುರಿತಂತೆ ನಟ ಕಿಶೋರ್ ಪ್ರತಿಕ್ರಿಯೆ ನೀಡಿದ್ದು, ದ್ವೇಷದ ಜ್ವಾಲೆ ಹರಡುತ್ತಾ ಹರಡುತ್ತಾ ದೇಶದ ಹೆಸರಿಗೂ ಬಂದು ಮುಟ್ಟಿದ್ದು ದೊಡ್ಡ ದುರಂತ ಎಂದಿದ್ದಾರೆ.
ಅವರು ಕೀಲಿ ಕೊಟ್ಟಂತೆಲ್ಲಾ ಆಡುವ ಈ ಗೊಂಬೆಯಾಟ ಬಿಟ್ಟು ಪ್ರಬುದ್ಧರಂತೆ ವರ್ತಿಸಲು ಸಾಧ್ಯವೇ? ಇಷ್ಟೂ ದಿನ ಕಾಣಿಸದ ಬ್ರಿಟಿಷ್ ಪ್ರಭಾವ ತನ್ನನ್ನು ವಿಮರ್ಶೆಗೆ ಒಳಪಡಿಸುವ ವಿರೋಧಿ ಪಕ್ಷದ ಮೈತ್ರಿಕೂಟ ಹೆಸರಿಟ್ಟುಕೊಂಡೊಡನೆ ಕಂಡದ್ದೇಕೆ? ಎಂದು ಪ್ರಶ್ನಿಸಿದ್ದಾರೆ.
ಅದಾನಿಯ ಭ್ರಷ್ಟಾಚಾರದ ಸಾಕ್ಷಿಗಳು ಬಯಲಾದೊಡನೆ ಕಂಡದ್ದೇಕೆ?, ಜಿನ್ಪಿಂಗ್, ಪುತಿನ್ ದೆಹಲಿಯ ಜಿ20ಯಿಂದ ಕೈತೊಳೆದುಕೊಂಡು 56ಇಂಚಿನ ಬಡಾಯಿಯನ್ನು ಠುಸ್ ಮಾಡಿದೊಡನೆ ಕಂಡದ್ದೇಕೆ..?
ನೈಜ ಸಮಸ್ಯೆಗಳಿಂದ, ಅಥವಾ ಇನ್ನಾವುದೋ ಭಯಂಕರ ಷಡ್ಯಂತ್ರದಿಂದ ಬೇರೆಡೆ ಗಮನ ತಿರುಚುವ ಚರ್ಚೋತ್ಪಾದನೆಯ ರಾಜಕೀಯಕ್ಕೆ ನಾವು ಬಲಿಯಾಗಬೇಕೆ..?
ಹೆಸರು ಬದಲಾದ ಮಾತ್ರಕ್ಕೆ ಮಣಿಪುರದ ಅತ್ಯಾಚಾರಗಳು ಕೊಲೆಗಳು ಬದಲಾದೀತೇ? ಕಶ್ಮೀರ ಶಾಂತವಾದೀತೇ? ರೈತರ ಆತ್ಮಹತ್ಯೆಗಳು ನಿಂತೀತೇ? ನಿರುದ್ಯೋಗ ಸಮಸ್ಯೆ ಸರಿಯಾದೀತೇ? ಪೆಟ್ರೋಲ್ ಕಮ್ಮಿ ಬೆಲೆಗೆ ಸಿಕ್ಕೀತೇ? ದಿನಬಳಕೆಯ ವಸ್ತುಗಳ ಬೆಲೆ ಇಳಿದೀತೇ.?
ಆಡಳಿತ ಪಕ್ಷದ ಕ್ಷುಲ್ಲಕ ಅಹಮ್ಮಿಗೆ, ಅಪಾಯಕಾರಿ ರಾಜಕಾರಣಕ್ಕೆ ನಮ್ಮ ವಿವೇಚನೆಯನ್ನು ಬಲಿ ಕೊಡಬೇಕೆ ?, ನಮ್ಮ ಅಮೂಲ್ಯ ಸಮಯವನ್ನು ಅರ್ಥಹೀನ ಚರ್ಚೆಯಲ್ಲಿ ವ್ಯರ್ಥ ಮಾಡಿಕೊಳ್ಳಬೇಕೆ.. ?
ಬ್ರಿಟೀಷರು ಬರುವುದಕ್ಕೆ ಮುನ್ನ ಸುಮಾರು 4 ನೇ ಶತಮಾನದಿಂದಲೇ ಇರುವ ಹೆಸರನ್ನು ಬ್ರಿಟೀಷರ ನೆಪದಲ್ಲಿ ಬದಲಾಯಿಸ ಹೊರಟಿರುವ ಈ ಧೂರ್ತ ಶಿಖಾಮಣಿಗಳು ನಿಜವಾಗಿ ಬ್ರಿಟೀಷರ ಕೊಡುಗೆಯಾದ ಇಂಗ್ಲೀಷ್ ಭಾಷೆಯ ಬಳಕೆಯನ್ನೂ ತೆಗೆದುಬಿಟ್ಟಾರೆ..? ಎಂದು ಸರಣಿ ಪ್ರಶ್ನೆ ಮಾಡಿರುವ ಕಿಶೋರ್. ಆಲೋಚಿಸಿ.. ಗತಕಾಲದಲ್ಲಿ ಬಾಳುವುದ ಬಿಟ್ಟು ವಿವೇಕಮತಿಗಳಾಗುವ, ನಿರಂಕುಶಮತಿಗಳಾಗುವ ಎಂದು ಕರೆ ನಡಿದ್ದಾರೆ..
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….