ಇಂಡಿಯಾ ಏನು ನಿಮ್ಮಪ್ಪಂದಾ..?, ತಾಕತ್ತಿದ್ದರೆ ದೇಶದ ಹೆಸರು ಬದಲಾಯಿಸಿ ; ಬಿಜೆಪಿಗೆ ಕೇಜ್ರಿವಾಲ್ ಸವಾಲು

ನವದೆಹಲಿ, (ಸೆ.16): ದೇಶದ ಹೆಸರನ್ನು ಇಂಡಿಯಾ ಬದಲು ಭಾರತ ಎಂದು ಬದಲಿಸ ಹೊರಟಿರುವ ಬಿಜೆಪಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತಿನ ಚಾಟಿ ಬೀಸಿದ್ದು ತಾಕತ್ತಿದ್ದರೆ ದೇಶದ ಹೆಸರು ಬದಲಾಯಿಸಿ ಎಂದು ಸವಾಲು ಹಾಕಿದ್ದಾರೆ.

ಭಾರತ ಏನು ನಿಮ್ಮಪ್ಪನಿಗೆ ಸೇರಿದ್ದಾ? ಎಂದು ಪ್ರಶ್ನಿಸಿದ ದಿಲ್ಲಿ ಮುಖ್ಯಮಂತ್ರಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಕಳೆದ ವರ್ಷದವರೆಗೆ ಬಿಜೆಪಿ ಸರ್ಕಾರ ಇಂಡಿಯಾ ಹೆಸರಿನಲ್ಲಿ ಹಲವಾರು ಕೇಂದ್ರೀಯ ಯೋಜನೆಗಳನ್ನು ತಂದಿತ್ತು. ಆದರೆ ಈಗ ವಿಪಕ್ಷಗಳ ಮೈತ್ರಿಕೂಟವು ಇಂಡಿಯಾ ಎಂದು ಹೆಸರಿಟ್ಟ ಬಳಿಕ ದೇಶದ ಹೆಸರನ್ನೇ ಬದಲಾಯಿಸಲು ಮುಂದಾಗಿದೆ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.

ಭಾರತವು ನಿಮ್ಮ ಅಪ್ಪನಿಗೆ ಸೇರಿದೆಯೇ? ಇದು 140 ಕೋಟಿ ಜನರಿಗೆ ಸೇರಿರುವುದು ಎಂದು ಹೇಳಿದ ಅವರು, ಇಂಡಿಯಾ ನಮ್ಮ ಹೃದಯದಲ್ಲಿದೆ, ಭಾರತವೂ ನಮ್ಮ ಹೃದಯದಲ್ಲಿದೆ. ಹಿಂದೂಸ್ತಾನ್ ಕೂಡಾ ನಮ್ಮ ಹೃದಯದಲ್ಲಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರವು ರಾಷ್ಟ್ರದ ಹೆಸರನ್ನು ಭಾರತ ಎಂದು ಬದಲಾಯಿಸುತ್ತೇವೆ ಎನ್ನುತ್ತಿದೆ. ನಾಳೆ, ವಿರೋಧ ಪಕ್ಷದ ಮೈತ್ರಿಕೂಟಕ್ಕೆ ಹೆಸರನ್ನು ‘ಭಾರತ್’ ಎಂದು ಇಟ್ಟರೆ ನೀವು ಮತ್ತೆ ದೇಶದ ಹೆಸರನ್ನು ಬದಲಾಯಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….