ಬೆಂಗಳೂರು, (ಆಗಸ್ಟ್.10): ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸಿನ ಶಕ್ತಿ ಪ್ರದರ್ಶನ ನಡೆದ ಮೈದಾನದಲ್ಲಿಯೇ ಇಂದು, ಬಿಜೆಪಿ-ಜೆಡಿಎಸ್ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಕಳೆದ ಶನಿವಾರ ಬಿಜೆಪಿ-ಜೆಡಿಎಸ್ ಆರಂಭಿಸಿದ್ದ ಪಾದ ಯಾತ್ರೆ ಶುಕ್ರವಾರ ಸಂಜೆ ಮೈಸೂರು ತಲುಪಿದ್ದು, ಶನಿವಾರ ಬೃಹತ್ ಸಮಾವೇಶದೊಂದಿಗೆ ಪಾದಯಾತ್ರೆ ಪೂರ್ಣಗೊಳ್ಳಲಿದೆ.
ಜನಾಂದೋಲನಾ ಯಾತ್ರೆಯ ಸಮಾರೋಪದಲ್ಲಿ ಕಾಂಗ್ರೆಸ್ ನಾಯಕರು ಟೀಕಿಸಿರುವುದಕ್ಕೆ ಶನಿವಾರ ಬಿಜೆಪಿ-ಜೆಡಿಎಸ್ ನಾಯಕರು ಠಕ್ಕರ್ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಆ.3ರಂದು ಮುಡಾ ಹಗರಣ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಸೇರಿ ರಾಜ್ಯ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ವಿರುದ್ಧ ಬೆಂಗಳೂರಿನಿಂದ ಜಂಟಿ ಪಾದಯಾತ್ರೆಯನ್ನು ಬಿಜೆಪಿ-ಜೆಡಿಎಸ್ ಆರಂಭಿಸಿದ್ದವು. ಮೈಸೂರಿನ ಮಹಾರಾಜ ಕಾಲೇಜು ಮೆದಾನದಲ್ಲಿ ಪಾದಯಾತ್ರೆಯ ಅದ್ದೂರಿ ಸಮಾರೋಪ ಸಮಾರಂಭ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪಾದಯಾತ್ರೆಯುದ್ದಕ್ಕೂ ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆ ಕೂಗಿ ಹಗರಣಗಳ ಬಗ್ಗೆ ಮಾತನಾಡಿದ್ದರು. ಮುಖ್ಯಮಂತ್ರಿ ಹಾಗೂ ರಾಜ್ಯ ಸರಕಾರದ ವಿರುದ್ದ ಉಭಯ ಪಕ್ಷಗಳ ನಾಯಕರು ಪ್ರತಿದಿನ ನಡೆದ ಬಹಿರಂಗ ಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈಗಾಗಲೇ ಕಾಂಗ್ರೆಸಿಗರು ಬಿಜೆಪಿ-ಜೆಡಿಎಸ್ ಅವಧಿಯಲ್ಲಿನ ಹಲವು ಹಗರಣಗಳನ್ನು ಪ್ರಸ್ತಾಪಿಸಿದೆ. ಇದೀಗ ಶನಿವಾರದ ಕಾರ್ಯಕ್ರಮದಲ್ಲಿ ಪ್ರತ್ಯುತ್ತರ ನೀಡುವುದರೊಂದಿಗೆ, ಕಾಂಗ್ರೆಸ್ನ ಅಕ್ರಮದ ಬಗ್ಗೆ ಇನ್ನಷ್ಟು ಗಟ್ಟಿ ಧ್ವನಿಯಲ್ಲಿ ಟೀಕಾಪ್ರಹಾರ ನಡೆಸುವ ಸಾಧ್ಯತೆಯಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….