ರಂಗ ಆರು ವರ್ಷದ ಬಾಲಕ. ಶಾಲೆಗೆ ಹೋಗುವದೆಂದರೆ ಕಿರಿ ಕಿರಿ. ತಾಯಿ ತಂದೆ ಒಮ್ಮೊಮ್ಮೆ ರುಚಿ ಹೇಳಿ ತಿನಿಸಿನ ಲಂಚ ಕೊಟ್ಟು, ಒಮ್ಮೆಮ್ಮೆ ಬೈದು ಬೆದರಿಸಿ ಶಾಲೆಗೆ ಕಳಿಸುತ್ತಿದ್ದರು. ಶಾಲೆಯ ಅಂಗಳದಲ್ಲಿ ಕಾಲಿಡುತ್ತಲೇ ರಂಗ ತಿರುಗಿ ಓಡಿಬರುತ್ತಿದ್ದನು. ಅವನ ಮನಸ್ಸೇ ಅಲ್ಲಿರುತ್ತಿರಲಿಲ್ಲ. ಗೆಳೆಯರೊಡನೆ ಜಗಳಾಡಿ, ತಾನು ಹೊಡೆದು ಇಲ್ಲವೇ ಹೊಡಿಸಿಕೊಂಡು ಅಳುತ್ತ ಮನೆಗೆ ಬರುತ್ತಿದ್ದನು.
ಮನೆಯಲ್ಲಿ ಇದ್ದಲಿ ತಂದು, ನೆಲದ ಮೇಲೆಯೋ ಗೋಡೆಯ ಮೇಲೆಯೋ ಗೆರೆ ಎಳೆಯುತ್ತಿದ್ದನು. ಮನಬಂದಂತೆ ಚಿತ್ರ ಬಿಡಿಸುತ್ತಿದ್ದನು. ತಾಯಿ ಕಂಡರೆ ಓಡಿಹೋಗುತ್ತಿದ್ದನು. ಎಳೆದುತಂದು ಶಾಲೆಗೆ ಕಳಿಸಿ ಬಂದರೂ, ತಾಯಿ ಮರೆಯಾಗುತ್ತಲೇ ಮತ್ತೆ ಪರಾರಿಯಾಗುತ್ತಿದ್ದನು.
ಬೈಲಲ್ಲಿ ಗೆರೆ ಎಳೆಯುವುದನ್ನು, ಕಲ್ಲು ಒಟ್ಟಿ ಆಡುವದನ್ನು ಓಣಿಯವರು ಕಂಡು ಹಿರಿಯರಿಗೆ ತಿಳಿಸುತ್ತಿದ್ದರು. ಇವೆಲ್ಲ ತುಂಟತನ ಮೈಗಳ್ಳತನಗಳನ್ನು ಕೇಳಿ ಕೇಳಿ ಅವರಿಗೂ ಬೇಜಾರಾಗಿ ಅತ್ತ ಲಕ್ಷ್ಯ ಕೊಡುವದನ್ನೇ ಬಿಟ್ಟರು. ಅವರಿಗೆ ಹೊಟ್ಟೆ ಬಟ್ಟೆಗೆ ದುಡಿಯುವದರಲ್ಲೇ ಹೊತ್ತು ಹೋಗುತ್ತಿತ್ತು.
ರಂಗ ಶಾಲೆಗೆ ಬರದ್ದನ್ನು ಕಂಡ ಗುರುಮಾತೆ ಶೀಲಾ ಅವರಿಗೆ ವ್ಯಥೆಯಾಯಿತು. ಅವರು ಮಕ್ಕಳನ್ನು ಮಮತೆಯಿಂದ ಕಾಣುತ್ತಿದ್ದರು. ವರ್ಗದ ಎಲ್ಲ ಮಕ್ಕಳ ಬಗ್ಗೆ ಕಾಳಜಿ ಇತ್ತು. ಪ್ರತಿಯೊಬ್ಬನಲ್ಲಿಯ ಸುಪ್ತಶಕ್ತಿಗಳನ್ನು ಆಸಕ್ತಿಯಿಂದ ನಿರೀಕ್ಷಿಸುತ್ತಿದ್ದರು.
ಮಕ್ಕಳಲ್ಲಿಯ ಕಲೆ ಜಾಣತನ ಕಂಡು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಅವರೇ ರಂಗನ ಮನೆಗೆ ಬಂದರು. ರಂಗನ ತಾಯಿ ಕಾಳು ಹಸನು ಮಾಡುತ್ತ ಕುಳಿತಿದ್ದಳು. ಶೀಲಾ ಅಕ್ಕಾವು ಬಂದುದನ್ನು ಕಂಡು ಜಮಖಾನ ಹಾಸಿ ಕುಳ್ಳಿರಿಸಿದಳು. ‘ರಂಗ ಎಲ್ಲಿ?’ ಎಂದು ಕೇಳಲಾಗಿ, ‘ಏನು ಮಾಡೂದು ಅಕ್ಕಾವೆ. ಎಲ್ಲೋ ಹೋಗಿದ್ದಾನ. ಅವಾ ತಿರುಗಾಲ ತಿಪ್ಪ, ಮೈಗಳ್ಳ ಆಗ್ಯಾನ. ಸಾಲಿಗಿ ಹೋಗ ಅಂದ್ರ ಹೋಗೂದಿಲ್ಲ. ಮನಿ ಗೋಡಿ ಹೊಲಸ ಮಾಡತಾನ. ಎಷ್ಟ ತಿಳಿ ಹೇಳಿದರೂ ಕೇಳೋದಿಲ್ಲ’ ಎಂದು ಬಿಡದೆ ಹೇಳಿದಳು.
‘ಸರಿ ನೀವು ಹೀಗೆ ಬಿಟ್ಟರೆ ಅವನು ಸುಧಾರಿಸುವನೇ? ಮುಂದಿನ ಭವಿಷ್ಯ ಏನು? ಅವನೇನು ಮಾಡುವನು?’ ಎಂದು ಕೇಳುತ್ತ ಶೀಲಾ ರಂಗನ ತಾಯಿಯ ಮುಖ ನೋಡಿದರು.
ಮುದ್ದೆಯಾದ ಮುಖದಲ್ಲಿ ಮಾತು ಹೊರಡದೆ, ‘ಏನು ಮಾಡೂದು ಅಕ್ಕಾವ್ರ. ಸಾಲಿ ಅಂದ್ರ ಓಡಿ ಹೋಗತಾನ. ಹೇಳಿ ಹೇಳಿ ಸಾಕಾಗ್ಯಾದ’ ಎಂದು ಮಾತು ಮುಗಿಸುವಷ್ಟರಲ್ಲಿ ಶೀಲಾ ಅವರೇ ಮುಂದಾಗಿ, ‘ಎಲ್ಲಾ ಪ್ರಯತ್ನ ಏನ ಮಾಡೀರಿ? ಎಲ್ಲಿ ಮಾಡೀರಿ? ಅವಾ ಸಾಲಿಗಿ ಏಕೆ ಹೋಗುವದಿಲ್ಲ? ಅದರ ಕಾರಣ ತಿಳಿದಿದ್ದೀರಾ? ಅವಾ ಏನಾದರೂ ಹೇಳಿದ್ದಾನೆಯೇ? ಅವನ ಬಯಕೆಗಳೇನು, ಆವ ಏನು ಮಾಡುತ್ತಿರುತ್ತಾನೆ? ತಿಳಿದಿದ್ದೀರಾ? ಎಲ್ಲಾ ತಾಯಿ ತಂದೆಗಳು ಮಗು ತುಂಟನಾದನೆಂದು ಮೈಗಳ್ಳನಾದನೆಂದು ತಿಳಿದು ಅವರತ್ತ ಲಕ್ಷ್ಯ ಹಾಕುವದನ್ನು ಬಿಟ್ಟರೆ ಮಕ್ಕಳ ಮುಂದಿನ ಭವಿಷ್ಯವೇನು? ಮಕ್ಕಳಲ್ಲಿ ಹುದುಗಿದ ಆಶೆ. ಆಕಾಂಕ್ಷೆ, ಕಲ್ಪನೆಗಳತ್ತ ಲಕ್ಷ್ಯ ಕೊಡುವದೇ ಇಲ್ಲ. ಇರಲಿ. ನಾಳೆ ಅವನನ್ನು ಶಾಲೆಗೆ ಕಳಿಸಿರಿ. ಪಾಟಿ ಪುಸ್ತಕ ಬೇಡ. ನೋಡಿ, ಗೋಡೆಯ ಮೇಲೆ ಗೆರೆ ಹೊಡೆಯುವ ಇದ್ದಲಿ ಬದಲು ಬಣ್ಣದ ಪೆನ್ಸಿಲ್, ಕಾಗದ ಕೊಟ್ಟು ಕಳಿಸಿರಿ’ ಎನ್ನುವಷ್ಟರಲ್ಲಿ ರಂಗ ಹೊರಗಿನಿಂದ ಓಡುತ್ತ ಬಂದು ಶೀಲಾ ಅಕ್ಕಾವರನ್ನು ಕಂಡು ಬಾಗಿಲಲ್ಲೇ ನಿಂತ.
‘ಯಾಕ ರಂಗಣ್ಣ?, ಸಾಲಿಗಿ ಯಾಕ ಬಂದಿಲ್ಲ. ಜಾಣ ಹುಡುಗನಾಗಿ ಸಾಲಿ ತಪ್ಪಿಸಿದರ ಹ್ಯಾಂಗ? ನಿಮ್ಮಮ್ಮಗ ಎಲ್ಲಾ ಹೇಳೀನಿ ನಾಳೆ ಸಾಲಿಗಿ ಬಾ’ ಎಂದು ಹೇಳಿದ ಶೀಲಾ ಅವರು ಮರಳಿದರು. ರಂಗ ಅವರು ಹೋಗುವದನ್ನೇ ನೋಡುತ್ತ ನಿಂತ.
ಮರುದಿನ ಗುರುಮಾತೆ ಹೇಳಿದಂತೆ ಕಾಗದ ಬಣ್ಣದ ಪೆನ್ಸಿಲ್ ಕೊಟ್ಟಾಗ ಹಿಗ್ಗಿದ. ಏನು ತಿಳಿಯಿತೋ ಏನೋ ತಟ್ಟನೆ ಶಾಲೆ ಕಡೆಗೆ ಓಡಿದ. ತಾಯಿ ಹಿಗ್ಗಿನಿಂದ ನೋಡುತ್ತ ನಿಂತಳು.
ಶೀಲಾ ಅವರು ಅವನಲ್ಲಿ ಹುದುಗಿದ ಕಲೆಯನ್ನು ಅರಿತು ಚಿತ್ರ ಬರೆಯಲು ಹೇಳಿದರು. ಬರೆದ ಚಿತ್ರಕ್ಕೆ ಮೆರುಗುಕೊಡುವಂತೆ ಹೊಸ ಹೊಸ ವಿಚಾರ ತಿಳಿಸಿ ಚಿತ್ರ ಬರೆಸಿದರು. ರಂಗನ ಕಲ್ಪನೆಗಳು ರಂಗು ರಂಗಾದವು. ಚಿತ್ತವಿಟ್ಟು ಚಿತ್ರ ಬಿಡಿಸುವದರ ಜೊತೆಗೆ ಓದು ಬರಹದಲ್ಲಿಯೂ ಮನಸ್ಸು ನಾಟಿತು. (ಕೃಪೆ; ಮಕ್ಕಳ ಅಭಿವೃದ್ಧಿ ಪ್ರಾಧಿಕಾರ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….