ಕೊಪ್ಪಳ, (ಆಗಸ್ಟ್.11): ಅಂಗನವಾಡಿಯಲ್ಲಿ ಮಕ್ಕಳ ಊಟದ ತಟ್ಟೆಯಲ್ಲಿ ಮೊಟ್ಟೆಯಿಟ್ಟು ಅದನ್ನು ಬಾಯಿಗಿಡುವ ಮುನ್ನವೇ ಕಸಿದುಕೊಳ್ಳುತ್ತಿದ್ದ ವಂಚನೆ ಪ್ರಕರಣವೊಂದು ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ, ಸಹಾಯಕಿ ಶೈನಜಾ ಬೇಗಂ ಅವರನ್ನು ಅಮಾನತು ಮಾಡಲಾಗಿದೆ.
ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಶಾಲೆಯ ಕಾರ್ಯಕರ್ತೆ, ಸಹಾಯಕಿ ಮಕ್ಕಳಿಗೆ ವಿತರಿಸುವ ಮೊಟ್ಟೆಯನ್ನು ಮಕ್ಕಳ ತಟ್ಟೆಯಲ್ಲಿ ಇಟ್ಟು ಫೋಟೋ ತೆಗೆದ ಬಳಿಕ ಆ ಮೊಟ್ಟೆಗಳನ್ನು ಮರಳಿ ಪಡೆದು ಹೊರಗಡೆ ಮಾರಾಟ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಲೆತಗ್ಗಿಸುವಂತ ಕೆಲಸ ಮಾಡಿದ್ದಾರೆ. ಇದರಿಂದ ಎಚ್ಚೆತ್ತ ಇಲಾಖೆಯು ಗುಂಡೂರು ಗ್ರಾಮದ ಅಂಗನವಾಡಿ ಶಾಲೆಯ ಕಾರ್ಯಕರ್ತೆ, ಸಿಬ್ಬಂದಿಯನ್ನು ಅಮಾನತು ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಮಕ್ಕಳು ಬಾಯಿಗೆ ಮೊಟ್ಟೆ ಹಾಕಿಕೊಳ್ಳೋಕ್ಕೆ ಮುಂಚೆನೇ ಕಾರ್ಯ ಕರ್ತರು ಮರಳಿ ಮೊಟ್ಟೆ ಕಸಿದಿದ್ದಾರೆ. ಈ ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯರು ಕೂಡ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎಂಬ ಮಾತಿದೆ. ಹಾಗೇ ಸರ್ಕಾರ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲೆಂದು ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಕೊಡುತ್ತಿದೆ. ನಾನು ಕೂಡ ಅಂಗನವಾಡಿಗಳಲ್ಲಿ ಶಿಸ್ತನ್ನು ತರಲು, ಬದಲಾವಣೆ ತರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದೇವೆ.
ಇದರ ನಡುವೆ, ಗುಂಡೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯೇ ಮಕ್ಕಳ ಪ್ಲೇಟ್ನಲ್ಲಿದ್ದ ಮೊಟ್ಟೆ ಎತ್ತಿಕೊಂಡಿದ್ದಾರೆ. ಮಕ್ಕಳು ತಿನ್ನಲು ಮುಂದಾದಾಗ ಮೊಟ್ಟೆ ಕಸಿದುಕೊಂಡಿದ್ದಾರೆ. ವಿಡಿಯೋ ನೋಡಿದರೆ ಕರುಳು ಚುರ್ ಎನ್ನುತ್ತದೆ.
ಈ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ. ಇಬ್ಬರನ್ನೂ ಶಾಶ್ವತವಾಗಿ ಡಿಸ್ಮಿಸ್ ಮಾಡಲು ಸೂಚಿಸಿದ್ದೇನೆ.
ಜೊತೆಗೆ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ್ದೇನೆ. ಅಲ್ಲದೆ, ಸಂಬಂಧಿಸಿದ ಸಿಡಿಪಿಒ ವಿರುದ್ಧವೂ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….