ದೊಡ್ಡಬಳ್ಳಾಪುರ, (ಆಗಸ್ಟ್.14): ಭಾರತೀಯ ಇತಿಹಾಸದಲ್ಲಿ ಅತ್ಯಂತ ಪ್ರಮುಖ ದಿನ ಆಗಸ್ಟ್ 15. ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.
ಈ ವರ್ಷ ನಮ್ಮ ಭಾರತ ತನ್ನ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಸುಮಾರು 200 ವರ್ಷಗಳ ಗುಲಾಮಗಿರಿಯ ನಂತರ ಭಾರತ ಆಗಸ್ಟ್ 15, 1947 ರಂದು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಗಳಿಸಿತು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಗಣರಾಜ್ಯವಾದ ಭಾರತದ ಎಲ್ಲಾ ರಾಜ್ಯಗಳಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈಗ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಆದರೆ ದೊಡ್ಡಬಳ್ಳಾಪುರದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಮಕ್ಕಳಿಗೆ ಸಿಹಿ ಹಂಚಿಕೆಯಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಶಿಕ್ಷಕರಲ್ಲಿ ಬೇಸರ, ಆಕ್ರೋಶಕ್ಕೆ ಕಾರಣವಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ನಗರದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಎಂಬ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಇತಿಹಾಸದಲ್ಲಿ ಮೊದಲು; ಆದರೆ ಏಕಾಏಕಿ ಈ ವರ್ಷದಿಂದ ಅಧಿಕಾರಿಗಳು ಮಕ್ಕಳಿಗೆ ಹಂಚುವ ಸಿಹಿಯಲ್ಲಿಯೂ ತಾರತಮ್ಯ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರನ್ವಯ ಸರ್ಕಾರಿ ಶಾಲೆಗಳನ್ನು ಹೊರತು ಪಡಿಸಿ, ಖಾಸಗಿ ಶಾಲೆ ಮಕ್ಕಳಿಗೆ ಸಿಹಿಯನ್ನು ವಿತರಿಸುವುದಿಲ್ಲ ಎಂದಿರುವ ಮಾಹಿತಿ ಹೊರಬಿದ್ದಿದ್ದು, ಖಾಸಗಿ ಶಾಲೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನಲ್ಲಿ ಮೊದಲಿನಿಂದಲೂ ಸರ್ಕಾರಿ, ಖಾಸಗಿ ಎಂಬ ಯಾವುದೇ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಸಂಭ್ರಮದಿಂದ ಸ್ವಾತಂತ್ರ್ಯ ಮಹೋತ್ಸವ ಆಚರಿಸಲಾಗುತ್ತಿದೆ. ಆದರೆ ಏಕಾಏಕಿ ಅಧಿಕಾರಿಗಳ ಈ ನಡೆ ತೀವ್ರ ಚರ್ಚೆಗೆ ಕಾರಣವಾಗಿದ್ದು, ಭಗತ್ ಸಿಂಗ್ ಕ್ರೀಡಾಂಗಣ ನಡೆಯಲಿರುವ ಕಾರ್ಯಕ್ರಮವನ್ನು ಖಾಸಗಿ ಶಾಲೆಗಳು ಬಹಿಷ್ಕರಿಸಿ, ತಮ್ಮ ತಮ್ಮ ಶಾಲೆಗಳಲ್ಲಿಯೇ ಆಚರಿಸಿಕೊಳ್ಳಲು ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಇಲ್ಲವೆಂಬುದು ಕೆಲ ತಿಂಗಳಿಂದ ಪದೇ ಪದೇ ಸುದ್ದಿಯಾಗುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಂಹ ಘಟನೆಗಳು ನಡೆಯುತ್ತಿವೆ.
ಈ ಕೂಡಲೇ ತಾಲೂಕು ಆಡಳಿತ, ನಗರಸಭೆ, ಶಿಕ್ಷಣ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಎಚ್ಚೆತ್ತು ಏಕಾಏಕಿ ಉದ್ಭವಾಗಿರುವ ಗೊಂದಲವನ್ನು ಬಗೆಹರಿಸಿಕೊಂಡು, ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆಗೆ ಯಾವುದೇ ದಕ್ಕೆಯಾಗದಂತೆ ಮುಂಜಾಗ್ರತೆ ವಹಿಸಬೇಕಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….