ಬೆಂಗಳೂರು: ಚುನಾವಣಾ ಬಾಂಡ್ ಮೂಲಕ ಹಣ ಸುಲಿಗೆ ಮಾಡಿರುವ ಆರೋಪ ಸಂಬಂಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ FIR ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ತಿಲಕ್ ನಗರ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ ಎನ್ನಲಾಗಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್ಟ್ ನೀಡಿದ್ದ ಆದೇಶದ ಸ್ವರೂಪದಲ್ಲೇ ನ್ಯಾಯಾಲಯ ನಿರ್ಮಲ ಸೀತಾರಾಮನ್ ಅವರ ವಿಚಾರದಲ್ಲೂ ಆದೇಶ ಕೊಟ್ಟಿದೆ.
ಚುನಾವಣಾ ಬಾಂಡ್ ಗಳ ಮೂಲಕ ಬೆದರಿಸಿ ಹಣವನ್ನು ಸುಲಿಗೆ ಮಾಡಲಾಗಿದೆ. ಹೀಗಾಗಿ ನಿರ್ಮಲಾ ಸೀತಾರಾಮನ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. FIR ದಾಖಲಿಸಬೇಕು ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್ ನ ಆದರ್ಶ್ ಅಯ್ಯರ್ ಎಂಬುವವರು ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು.
ಈ ಅರ್ಜಿಯ ವಿಚಾರಣೆ ಇಂದು ನಡೆಸಿರುವ ನ್ಯಾಯಾಲಯ ಎಫ್‌ಐಆರ್ ದಾಖಲಿಸಿ ಎಂದು ಬೆಂಗಳೂರಿನ ತಿಲಕ್ ನಗರದ ಪೊಲೀಸರಿಗೆ ಆದೇಶ ಮಾಡಿದೆ ಎಂದು ತಿಳಿದುಬಂದಿದೆ. ಅಲ್ಲದೇ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅ.10ಕ್ಕೆ ಕೋರ್ಟ್ ಮುಂದೂಡಿದೆ ಎಂದು ವರದಿಯಾಗಿದೆ.