ಬೆಂಗಳೂರು: ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 6 ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಶನಿವಾರ ಕೂಡ ಅಲ್ಲಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (weather report) ತಿಳಿಸಿದೆ.
ಹವಾಮಾನ ವರದಿ ಅನ್ವಯ ಕಳೆದ 24 ಗಂಟೆ ಅವಧಿಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಹೋಬಳಿಯಲ್ಲಿ 9.07 ಮಿ.ಮೀ, ದೊಡ್ಡಬೆಳವಂಗಲ 12.08 ಮಿ.ಮೀ, ಮಧುರೆ 3.02 ಮಿ.ಮೀ, ಸಾಸಲು 20.02 ಮಿ.ಮೀ, ತೂಬಗೆರೆ 9.06 ಮಿ.ಮೀ ಒಟ್ಟು 11.10 ಮಿ.ಮೀ ಮಳೆಯಾಗಿದೆ
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸಹಿತ ಹಲವು ಭಾಗಗಳಲ್ಲಿ ಸಾಧಾರಣ ಮಳೆಯಿದೆ. ಮೈಸೂರು, ಮಂಡ್ಯ, ಕೊಡಗು, ಕೋಲಾರ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಮಳೆಯಾಗಲಿದೆ ಎನ್ನಲಾಗಿದೆ.
ಕೆಲವು ಕಡೆ ಗುಡುಗು ಸಹಿತ ಮಳೆಯೂ ಆಗಿದೆ. ಬೆಳಗಾವಿ, ಗದಗ, ಧಾರ ವಾಡ ಜಿಲ್ಲೆಗಳಲ್ಲೂ ಹಗುರದಿಂದ ಸಾಧಾರಣ ಮಳೆ ಆಗಿದೆ. ಶನಿವಾರದಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಮಳೆಯಾಗಲಿದೆ.
ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಚಿತ್ರದುರ್ಗ, ಶಿವಮೊಗ್ಗ ಭಾಗದಲ್ಲೂ ಮಳೆಯಾಗಲಿದೆ.
ಭಾನುವಾರದಂದೂ ಕೂಡ ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಮಳೆಯಾಗಬಹುದು ಎನ್ನುವ ಮುನ್ಸೂಚನೆ ನೀಡಲಾಗಿದೆ.