ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಹೋಬಳಿಯ ಗುಂಡಮಗೆರೆಯಲ್ಲಿಂದು (Gundamagere) ಶ್ರೀ ಶನೇಶ್ವರ ಸ್ವಾಮಿಯ ಎರಡನೆ ವರ್ಷದ ರಥೋತ್ಸವ ಹಾಗೂ ಆರತಿ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಮೇ.22ರಂದು ಶನಿಮಹಾತ್ಮಸ್ವಾಮಿಗೆ ಪುಣ್ಯಾಹ, ಕಲಶ ಸ್ಥಾಪನೆ ಪಂಚಾಮೃತ ಅಭಿಷೇಕ, ಗಣಪತಿಪೂಜೆ, ನವಗ್ರಹ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ಶನಿಶಾಂತಿ ಹೋಮ, ಗರುಡಗಂಬಕ್ಕೆ ಪೂಜೆ, ಧ್ವಜಾರೋಹಣಪೂಜೆ, ಪೂರ್ಣಾಹುತಿ, ನೈವೇದ್ಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ 6-00 ಕ್ಕೆ ಕಲ್ಯಾಣೋತ್ಸವ ಹಾಗೂ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕೈಗೊಳ್ಳಲಾಗಿತ್ತು.
ಶುಕ್ರವಾರದಂದು ಬೆಳಿಗ್ಗೆ ಶನಿಮಹಾತ್ಮಸ್ವಾಮಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಂಗಳಾರತಿ, ಅಭಿಜಿತ್ ಮುಹೂರ್ತ 12-31 ರಿಂದ 12-42 ಕ್ಕೆಸರಿಯಾಗಿ ಬ್ರಹ್ಮರತೋತ್ಸವ ನಡೆಸಲಾಯಿತು.
ಹರಕೆ ಹೊತ್ತ ಭಕ್ತರು ಭಕ್ತಿ ಭಾವದಿಂದ ಬಾಳೆಹಣ್ಣು, ದವನ ಎಸೆದು ಹರಕೆ ತೀರಿಸಿದರು.
ರಥೋತ್ಸವದ ನಂತರ ಅನ್ನಸಂತರ್ಪಣೆ, ಸಂಜೆ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಭಜನಾ ಮಂಡಲಿಯವರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.
ಶನಿವಾರದಂದು ಸ್ವಾಮಿಗೆ ಸಂಜೆ ಎಲ್ಲಾ ಗ್ರಾಮಸ್ಥರಿಂದ ಆರತಿಗಳ ಸೇವೆ, ರಾತ್ರಿ 9-00 ಕ್ಕೆ ಜಿ.ಎಂ.ಗಂಗಾಧರಗೌಡ ಮತ್ತು ಜಿ.ಎಂ. ನಾಗರಾಜುರವರಿಂದ ರಾಜ ಸತ್ಯವ್ರತ ಎಂಬ ಹರಿಕಥಾ ಕಾಲಕ್ಷೇಪವನ್ನು ಏರ್ಪಡಿಸಲಾಗಿದೆ.