ದೊಡ್ಡಬಳ್ಳಾಪುರ (Doddaballapura): ನಗರದ ಬಸವ ಭವನದಲ್ಲಿ ಮೇ 25 ರಂದು ಭಾವೈಕ್ಯ ಧರ್ಮಸಮಾರಂಭ ಹಾಗೂ ಇಷ್ಟಲಿಂಗ ಮಹಾಪೂಜೆ ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗತತ್ಪಾದರ ಸಮ್ಮುಖದಲ್ಲಿ ನಡೆಯಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಲೋಕೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಸುಜಯ್ ಕುಮಾರ್ ಹೇಳಿದರು.
ಅವರು ನಗರದ ಬಸವ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಮಾರಂಭದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸುಮಾರು ಎರಡು ಸಾವಿರ ಜನ ಸೇರುವ ನಿರೀಕ್ಷೆ ಇದೆ. ಈಗಾಗಲೇ ಎಲ್ಲಾ ಸಿದ್ದತೆಗಳು ನಡೆದಿವೆ. ಮೇ 25 ರಂದು ಬೆಳಿಗ್ಗೆ 7 ಗಂಟೆಯಿಂದ ಶಿವದೀಕ್ಷೆ ನಡೆಯಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ.
ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗಲಿರುವ ಭಾವೈಕ್ಯ ಧರ್ಮಸಮಾರಂಭವನ್ನು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವ ಬಿ.ಈಶ್ವರಖಂಡ್ರೆ ಉದ್ಘಾಟಲಿದ್ದಾರೆ.
ಯಡಿಯೂರು ಮಠದ ರೇಣುಕ ಶಿವಾಚಾರ್ಯಸ್ವಾಮೀಜಿ, ಸಿದ್ದರಬೆಟ್ಟದ ವೀರಭದ್ರ ಶಿವಾರ್ಯಸ್ವಾಮೀ, ತಾವರೆಕೆರೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯಸ್ವಾಮೀಜಿ. ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯಸ್ವಾಮೀಜಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಧೀರಜ್ ಮುನಿರಾಜು, ಸಂಸತ್ ಸದಸ್ಯ ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಶಂಕರ ಮಹದೇವ ಬಿದರಿ,ರಾಷ್ಟ್ರೀಯ ಉಪಾಧ್ಯಕ್ಷ ಸಚ್ಚಿದಾನಂದಮೂರ್ತಿ ಮುಂತಾದವರು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಭಾಗವಹಿಸುವ ಎಲ್ಲರಿಗೂ ಇಡೀ ದಿನ ಅನ್ನದಾಸೋಹ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲ್ಲೂಕು ಖಜಾಂಚಿ ವೀರಣ್ಣ, ಜಿಲ್ಲಾ ನಿರ್ದೇಶಕ ಪಿ.ಪ್ರಭಾಕರ್ ಇದ್ದರು.