ಬೆಂಗಳೂರು: ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಏನುತ್ತಿದ್ದ ಕೆ.ಎನ್. ರಾಜಣ್ಣ ಆಗಸ್ಟ್ ತಿಂಗಳಲ್ಲಿಯೇ ಸಚಿವ ಸಂಪುಟದಿಂದ ವಜಾಗೊಳ್ಳುವ ಮೂಲಕ ಕ್ರಾಂತಿ ಗೀತೆ ಹಾಡುವ ಮುನ್ನವೇ ತಮ್ಮ ಲೂಸ್ ಟಾಕ್‌ಗಳಿಗೆ ಬೆಲೆ ತೆತ್ತಿದ್ದಾರೆ ಎನ್ನುವ ವಿಶ್ಲೇಷಣೆಗಳು ಆರಂಭವಾಗಿದೆ.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಹೇಳಿಕೆಯಿಂದ ಪಕಕ್ಕೆ ಹಾಗೂ ಸರಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದ ರಾಜಣ್ಣ ಅವರ ವಿರುದ್ಧ ಪಕ್ಷದೊಳಗೆ ತೀವ್ರ ಆಕ್ಷೇಪವಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ದಲಿತ ನಾಯಕ ಎನ್ನುವ ಕಾರಣಕ್ಕೆ ಎಚ್ಚರಿಕೆ ಹೊರತಾಗಿ ಯಾವುದೇ ಕ್ರಮವಹಿಸಲು ಸಾಧ್ಯವಾಗಿರಲಿಲ್ಲ.
ಆದರೀಗ ಕೆಲ ಖಾಸಗಿ ಚಾನಲ್‌ಗಳ ಟ್ರ್ಯಾಪ್ ಪ್ರಶ್ನೆಗಳಿಗೆ ಸಿಲುಕಿ ಸ್ವತಃ ರಾಹುಲ್ ಗಾಂಧಿ ಅವರ ಪ್ರತಿಭಟನೆಯನ್ನೇ ಟೀಕಿಸಿದ್ದರಿಂದ ಸಂಪುಟದಿಂದಲೇ ವಜಾಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗುತ್ತದೆ.
ಕೆ.ಎನ್. ರಾಜಣ್ಣ ನೀಡಿದ್ದ ವಿವಾದಾತ್ಮಕ ಹೇಳಿಕೆಗಳು
ಇನ್ನೂ ಕೆಲ ಖಾಸಗಿ ಚಾನಲ್ಗಳು ಲೋಗೋ ಹಿಡಿದು ವಿವಾತ್ಮವಾಗಿ ತಮಗೆ ಬೇಕಾದಂತ ಪ್ರಶ್ನೆಗಳಿಗೆ ರಾಜಣ್ಣರಿಂದ ಪ್ರತಿಕ್ರಿಯೆ ಪಡೆದು ಸೆನ್ಷೇನ್ ಸೃಷ್ಟಿಸುತ್ತಿದ್ದದ್ದು ಎಲ್ಲರಿಗೂ ತಿಳಿದಿರುವ ವಿಷಯ.
ಅಂತೆಯೇ ಚಾನಲ್ ವರದಿಗಾರರ ಪ್ರಶ್ನೆಗಳಿಗೆ ಸಿಲುಕಿದ ರಾಜಣ್ಣ ಅವರು ರಾಜ್ಯದಲ್ಲಿ ಸೆಪ್ಟೆಂಬರ್‌ನಲ್ಲಿ ದೊಡ್ಡ ರಾಜಕೀಯ ಕ್ರಾಂತಿ ಸಂಭವಿಸಲಿದೆ. ಆಗ ಸಚಿವ ಸಂಪುಟ ಬದಲಾವಣೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರಾಜ್ಯದಲ್ಲಿ 5 ವರ್ಷ ಸಿಎಂ ಆಗಿರುತ್ತಾರೆ. ಸಿಎಂ ಹುದ್ದೆ ರಾಜ್ಯದಲ್ಲಿ ಖಾಲಿ ಇಲ್ಲ.
2028ಕ್ಕೂ ಸಿದ್ದರಾಮಯ್ಯ ಅವರದ್ದೇ ನಾಯಕತ್ವ, ಅವರೇ ಸಿಎಂ
ಡಿಸಿಎಂ ಸ್ಥಾನ ಎಂದರೆ ತಲೆ ಮೇಲೆ ಕಿರೀಟ ಇರೊಲ್ಲ. ಕೆಪಿಸಿಸಿ ಅಧ್ಯಕ್ಷಸ್ಥಾನದಿಂದ ಡಿ.ಕೆ. ಶಿವಕುಮಾರ್ ಅವರನ್ನು ಬದಲಾಯಿಸಬೇಕು.
ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಶಾಸಕರು, ಸಚಿವರ, ಅಧಿಕಾರಿಗಳ ಸಭೆ ನಡೆಸಿದ್ದರ ವಿರುದ್ದ ಬಹಿರಂಗವಾಗಿ ಆಕ್ರೋಶ.
ರಾಜ್ಯದ 48 ರಾಜಕೀಯ ನಾಯಕರ ವಿರುದ್ದ ಹನಿಟ್ರ್ಯಾಪ್ ಮಾಡಲಾಗಿದೆ, ರಾಜ್ಯದಲ್ಲಿ ಸಮುದಾಯಕ್ಕೆ ಒಬ್ಬರಂತೆ 5 ಡಿಸಿಎಂ ಹುದ್ದೆ ಸೃಷ್ಟಿಸಬೇಕು, ನನ್ನ ವಿರುದ್ಧ ಹನಿಟ್ರಾಪ್ ಮಾಡಲಾಗಿದೆ ಎಂದು ರಾಜಣ್ಣ ದೂರನ್ನು ನೀಡಿದ್ದರು. ಆದರೆ ಅದು ತನಿಖೆಯಲ್ಲಿ ಸುಳ್ಳಾಯಿತು.
ವರಿಷ್ಠರಿಗೆ ತಪ್ಪು ಗ್ರಹಿಕೆ
ಸಚಿವ ಸಂಪುಟದಿಂದ ವಜಾಗೊಂಡಿದ್ದರ ಹಿಂದೆ ಕೆಲ ನಾಯಕರ ಪಿತೂರಿ ನಡೆಸಿದ್ದು ಯಾರು ಎಂದು ಕಾಲ ಬಂದಾಗ ಬಹಿರಂಗಪಡಿಸುತ್ತೇನೆ ಎಂದು ವಜಾಗೊಂಡ ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಅಲ್ಲದೆ, ತಮ್ಮನ್ನು ಸಂಪುಟದಿಂದ ವಜಾ ಮಾಡುವುದು ಹೈಕಮಾಂಡ್ ತೀರ್ಮಾನ. ಅದನ್ನು ನಾನು ಒಪ್ಪಿದ್ದೇನೆ. ಹೈಮಾಂಡ್ ನಿರ್ಧಾರವನ್ನು ಪ್ರಶ್ನಿಸಲು ಹೋ ಗುವುದಿಲ್ಲ. ಹೈಕಮಾಂಡ್‌ಗೆ ಮುಜುಗರವಾಗಲು ನಾನು ಬಯಸುವುದಿಲ್ಲ ಎಂದೂ ಹೇಳಿದ್ದಾರೆ.
ಮಜತೆಗೆ, ಹೈಕಮಾಂಡ್ ವರಿಷ್ಠರು ನನ್ನ ಬಗ್ಗೆ ತಪ್ಪು ತಿಳುವಳಿಕೆ ಬರು ವಂತೆ ಮಾಡಲಾಗಿದೆ. ಹೀಗಾಗಿ ಸಂಪುಟದ ಸಹೋದ್ಯೋಗಿಗಳ ಜತೆಗೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುವೆ.
ಡಿ.ಕೆ.ಶಿವಕುಮಾರ್ ತಲೆಗೆ ಕಟ್ಟಲು ಬಿಜೆಪಿ ಯತ್ನ
ಬಸನಗೌಡ ಪಾಟೀಲ್ ಯತ್ನಾಳ್ ಅವರ ಲೂಸ್ ಟಾಕ್‌ನಿಂದ ಇಕ್ಕಟ್ಟಿಗೆ ಸಿಲುಕಿ, ವರಿಷ್ಠರಿಗೆ ಮುಗಿಬಿದ್ದು ಉಚ್ಛಾಟನೆ ಮಾಡಿಸಿದ ಬಿಜೆಪಿ ರಾಜ್ಯದ ಮುಖಂಡರು, ಈಗ ಕೆ.ಎನ್.ರಾಜಣ್ಣ ಪ್ರಕರಣವನ್ನು ಬಳಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಈ ಕುರಿತಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರ ಖುರ್ಚಿಯ ಎರಡು ಕಾಲು ಮುರಿದ್ದಿದ್ದಾರೆ, ಇನ್ನೆರಡು ಕಾಲು ಮುರಿದರೆ ಸಿಎಂ ಸ್ಥಾನ ಬಿದ್ದು ಹೋಗುತ್ತದೆ ಎಂದು ಲೇವಡಿ ಮಾಡಿ, ರಾಜಣ್ಣ ಪ್ರಕರಣವನ್ನು ಡಿ.ಕೆ.ಶಿವಕುಮಾರ್ ತಲೆ ಕಟ್ಟಲು ಯತ್ನಿಸಿದ್ದಾರೆ.