ಮಧುಗಿರಿ: ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ (K.N. Rajanna) ಅವರನ್ನು ವಜಾ ಮಾಡಿರುವುದನ್ನಜ ವಿರೋಧಿಸಿ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಮಧುಗಿರಿಯಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆ ವೇಳೆ ಅಭಿಮಾನಿ ಯುವಕನೋರ್ವ ಪೆಟ್ರೋಲ್ ಸುರಿದು ಕೊಂಡು ಸಾರ್ವಜನಿಕವಾಗಿ ಆತ್ಮಾಹುತಿಗೆ ಯತ್ನಿಸಿದ ಘಟನೆಯೂ ನಡೆದಿದೆ.
ಕೆ.ಎನ್ ರಾಜಣ್ಣ ಅವರಿಂದ ವಜಾ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಯುವಕನೊಬ್ಬ ತನ್ನ ಬಳಿಯಿದ್ದ 2 ಲೀಟರ್ ಕ್ಯಾನ್ ನಿಂದ ಪೆಟ್ರೋಲ್ ತೆಗೆದುಕೊಂಡು ತಲೆಯ ಮೇಲೆ ಸುರಿದುಕೊಳ್ಳಲು ಯತ್ನಿಸಿದ.

ಕೂಡಲೇ ಸ್ಥಳದಲ್ಲಿದ್ದವರು ಆತನ ಕೈಯಿಂದ ಬಾಟಲ್ ಕಿತ್ತುಕೊಂಡು ಅನಾಹುತವನ್ನು ತಪ್ಪಿಸಿದ್ದಾರೆ. ಅಲ್ಲದೇ ಕೂಡಲೇ ಆತನನ್ನು ಸ್ಥಳದಿಂದ ಹೊರಗೆ ಕರೆದೊಯ್ಯಲಾಯಿತು.
ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿರುವ ಕೆ.ಎನ್ ರಾಜಣ್ಣ ಅಭಿಮಾನಿಗಳು ಹಲವೆಡೆ ಬಸ್ ತಡೆದು ಪ್ರತಿಭಟನೆ ಮಾಡಿದ್ದಾರೆ. ಅಲ್ಲದೇ, ರಾಜಣ್ಣ ಅವರ ಫೋಟೋ ಹಿಡಿದು ಬಸ್ ಕೆಳಗೆ ಮಲಗಿ ಪ್ರತಿಭಟನೆ ನಡೆಸಿದರು. ರಸ್ತೆಯುದ್ದಕ್ಕೂ ರಾಜಣ್ಣ ಭಾವಚಿತ್ರ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಂಗಡಿ ಬಂದ್ ಮಾಡದಿದ್ದಕ್ಕೆ ಬೆಂಬಲಿಗರರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ರಸ್ತೆಯಲ್ಲಿದ್ದ ಬಟ್ಟೆ ಅಂಗಡಿಯ ಗೊಂಬೆಗಳನ್ನ ಒಡೆದುಹಾಕಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಧುಗಿರಿಯಲ್ಲಿ ಇಂದು ಹಲವೆಡೆ ರಸ್ತೆ ತಡೆ, ಪ್ರತಿಭಟನೆ ನಡೆಸಲಾಗುತ್ತಿದ್ದು ಕೆ.ಎನ್. ರಾಜಣ್ಣ ಅವರ ರಾಜೀನಾಮೆ ಹಿಂಪಡೆದು ಸಚಿವ ಸ್ಥಾನ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಕಾಂಗ್ರೆಸ್ (Congress) ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿರುವ ಮಹತ್ವದ ನಿರ್ಧಾರದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಮಧುಗಿರಿಯ ಬಳಿ ಹೆದ್ದಾರಿಯ ಮೇಲೆ ಮಲಗಿ ಅಭಿಮಾನಿಗಳು ರಸ್ತೆ ಪ್ರತಿಭಟನೆ ನಡೆಸಿದರು. ಹೈಕಮಾಂಡ್ ನಿರ್ಧಾರಕ್ಕೆ ರಾಜಣ್ಣ ಅಭಿಮಾನಿಗಳ ತಿರುಗೇಟು ನೀಡಲು ನಿರ್ಧರಿಸಿದ್ದು, ಮಧುಗಿರಿ ಪಟ್ಟಣದಲ್ಲಿ ರಾಜಣ್ಣ ಬೆಂಬಲಿಗರು ಮೆರವಣಿಗೆ, ಜಾಥಾ, ರಸ್ತೆತಡೆಗಳಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ವ್ಯಕ್ತಪಡಿಸಿದರು.
ವಾಲ್ಮೀಕಿ ಕ್ರಾಂತಿ ಸೇನೆ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ ಅವರ ಅಭಿಮಾನಿಗಳು, ರಾಜಣ್ಣ ನೇರ ನುಡಿ ವ್ಯಕ್ತಿತ್ವವುಳ್ಳವರು. ಅವರು ಮಾತನಾಡಿರುವುದು ಸರಿಯಾಗಿದೆ. ಅವರ ರಾಜಿನಾಮೆ ಕ್ರಮ ಸರಿಯಲ್ಲ. ರಾಜೀನಾಮೆಯನ್ನು ಹೈಕಮಾಂಡ್ ವಾಪಸು ಪಡೆಯಬೇಕು. ರಾಜಣ್ಣ ಜಾತ್ಯಾತೀತ ನಾಯಕ. ಅವರ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಂಡ ನಿರ್ಧಾರ ಸರಿಯಲ್ಲ. ಈ ಕೂಡಲೇ ಅವರ ರಾಜೀನಾಮೆ ವಾಪಸು ಪಡೆಯುವಂತೆ ಆಗ್ರಹ ಮಾಡಿದರು.
ನಾವು ಕಾಂಗ್ರೆಸ್ ನೋಡಿ ಮತ ಹಾಕಿಲ್ಲ. ರಾಜಣ್ಣ ಅವರನ್ನು ನೋಡಿ ಮತ ಹಾಕಿದ್ದೇವೆ. ಅವರಿಗೋಸ್ಕರ ಕಾಂಗ್ರೆಸ್ ಸಂಘಟನೆ ಮಾಡಿದ್ದೇವೆ ಎಂದು ಆಕ್ರೋಶ ಹೊರಹಾಕಿದರು.
ರಾಜಣ್ಣ ಅವರ ರಾಜಿನಾಮೆ ಹಿಂದೆ ಕಾಣದ ಕೈಗಳ ಕೈವಾಡವಿದೆ. ಅದೆಲ್ಲಾ ಮುಂದಿನ ದಿನಗಳಲ್ಲಿ ಬಯಲಾಗಲಿದೆ. ಇಡೀ ಕಾಂಗ್ರೆಸ್ ಪಕ್ಷಕ್ಕೆ ರಾಜಣ್ಣ ಅವರ ರಾಜಿನಾಮೆ ದೊಡ್ಡ ಪೆಟ್ಟು ಇದ್ದಂತೆ. ರಾಜಣ್ಣ ಅವರ ರಾಜಿನಾಮೆ ವಾಪಸು ಪಡೆಯದಿದ್ದಲ್ಲಿ ಇಡೀ ರಾಜ್ಯಾದ್ಯಂತ ಉಗ್ರಹೋರಾಟ ಮಾಡಲಾಗುವುದು ಎಂದು ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.