ಬೆಂಗಳೂರು: ರಾಜ್ಯದ ಜನರಿಂದ ಹೆಚ್ಚುವರಿಯಾಗಿ 56 ಸಾವಿರ ಕೋಟಿ ರೂ. ತೆರಿಗೆ ವಸೂಲಿ ಮಾಡುತ್ತಿದ್ದರೂ, ಅಭಿವೃದ್ಧಿ ಮಾತ್ರ ನಡೆಯುತ್ತಿಲ್ಲ. ಎಷ್ಟೇ ಗ್ಯಾರಂಟಿಗಳನ್ನು ಕೊಟ್ಟರೂ ನಮಗೆ ತೊಂದರೆ ಇಲ್ಲ. ಆದರೆ ಅಭಿವೃದ್ಧಿ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಆಗ್ರಹಿಸಿದರು.
ವಿಧಾನಸಭೆಯಲ್ಲಿ ಮಾತನಡಿದ ಅವರು, ರಾಜ್ಯದಲ್ಲಿ ವಿವಿಧ ತೆರಿಗೆ, ಶುಲ್ಕ ಹೆಚ್ಚಿಸಿ ಒಟ್ಟು 56 ಸಾವಿರ ಕೋಟಿ ರೂ. ತೆರಿಗೆಯನ್ನು ಜನರಿಂದ ವಸೂಲಿ ಮಾಡುತ್ತಿದ್ದರೂ, ಇದನ್ನು ಅಭಿವೃದ್ಧಿಗೆ ಬಳಸುತ್ತಿಲ್ಲ.
ಗ್ಯಾರಂಟಿಗಳಿಗೆ ಈ ಹಣವನ್ನು ಬಳಸಿದರೂ ಇನ್ನೂ ಹಣ ಉಳಿಯುತ್ತದೆ. ಗ್ಯಾರಂಟಿಗೆ ಹಣ ಕೊಡಬೇಡಿ ಎಂದು ಹೇಳುತ್ತಿಲ್ಲ. ಆದರೆ ಕಾಂಗ್ರೆಸ್ ಶಾಸಕರೇ ಇದನ್ನು ವಿರೋಧಿಸುತ್ತಿದ್ದಾರೆ. ಗ್ಯಾರಂಟಿ ಕೊಟ್ಟರೆ ಎಲ್ಲ ದಿವಾಳಿ ಎಂದು ಶಾಸಕರು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಒಡೆದ ಮನೆಯಾಗಿದೆ. ಶಾಸಕರಿಗೆ ಅನುದಾನ ನೀಡಿದ್ದರೆ ಬಾಯಿ ಮುಚ್ಚಿಕೊಂಡು ಹೇಳುತ್ತಿದ್ದರು. ಅನುದಾನ ಕೊಡದೆ ಅಭಿವೃದ್ಧಿ ಮಾಡದೇ ಇರುವುದರಿಂದ ಈ ರೀತಿಯಾಗಿದೆ. ಕೆಎಸ್‌ಆರ್‌ಟಿಸಿಗೆ 1554 ಕೋಟಿ ರೂ. ಬಿಎಂಟಿಸಿಗೆ 532 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ ಎಂದರು.
ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿಯ 35,000 ಕೋಟಿ ರೂ. ಪಡೆದು ಗ್ಯಾರಂಟಿಗೆ ಬಳಸಲಾಗಿದೆ. ದಲಿತರ ಹಣವನ್ನು ಮುಟ್ಟಬಾರದೆಂದು ಇವರೇ ಕಾನೂನು ರೂಪಿಸಿದ್ದರು. ಸರ್ಕಾರ ಆರಂಭದಲ್ಲಿ ತೆರಿಗೆ ವಿಧಿಸಲ್ಲ, ಕಮಿಶನ್ ಹಣವನ್ನು ಉಳಿಸಿ ಅಭಿವೃದ್ಧಿಗೆ ನೀಡುತ್ತೇವೆಂದು ಹೇಳಿದ್ದರು. ಆದರೀಗ ಕಮಿಶನ್ 60% ಆಗಿದೆ ಎಂದು ಗುತ್ತಿಗೆದಾರರು ಹೇಳಿದ್ದಾರೆ. 27 ತಿಂಗಳಲ್ಲಿ 25 ತೆರಿಗೆ ವಿಧಿಸಿದ್ದೀರಿ. ಕಸದ ಸೆಸ್ ದುಪ್ಪಟ್ಟು ಮಾಡಲಾಗಿದೆ. ಹಾಲಿನ ದರ ಎರಡು ಬಾರಿ ಏರಿಸಲಾಗಿದೆ. ಬಸ್ ದರ ಶೇ.15 ಏರಿಕೆ, ವಾಹನ ದರ ಶೇ.9 ಏರಿಕೆ, ಕಾವೇರಿ ನೀರು ಶುಲ್ಕ ಏರಿಕೆ, ಒಳಚರಂಡಿ ಶುಲ್ಕ 300% ಏರಿಕೆ, ಮದ್ಯದ ದರ 40% ಏರಿಕೆ, ಮದ್ಯದಂಗಡಿ ಲೈಸೆನ್ಸ್ ಶುಲ್ಕ 50% ಏರಿಕೆ, ವಿದ್ಯುತ್ ದರ 36 ಪೈಸೆ ಏರಿಕೆ, ಮೆಟ್ರೊ ದರ ಏರಿಕೆ, ಆಸ್ತಿ ಮಾರ್ಗಸೂಚಿ ದರ ಏರಿಕೆ, ವೃತ್ತಿ ತೆರಿಗೆ ಹೆಚ್ಚಳ, ಸರ್ಕಾರಿ ಆಸ್ಪತ್ರೆಗಳ ಸೇವಾ ಶುಲ್ಕ ಹೆಚ್ಚಳ, ಕಾರ್ಮಿಕ ಇಲಾಖೆಯಲ್ಲಿ 250 ರೂ. ವರೆಗೆ ತೆರಿಗೆ ಹೆಚ್ಚಳ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರೇರಾ ಹೊರಗೆ ಒಂದು ಫ್ಲ್ಯಾಟ್‌ಗೆ 15,000 ರೂ. ವಿಧಿಸಲಾಗಿದೆ. ಇದು ಒಂದು ರೀತಿಯಲ್ಲಿ ಟ್ಯಾಕ್ಸ್ ಟೆರರಿಸಂ ಆಗಿದೆ ಎಂದು ದೂರಿದರು.
ಮನೆಯೊಳಗೆ ಕಾರು ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತದೆ. ಪಂಚಾಯಿತಿ ಇ-ಖಾತೆಗೆ 1,000 ರೂ. ಶುಲ್ಕ, ಬಿಬಿಎಂಪಿಯಲ್ಲಿ ಇ-ಖಾತಾ ಮಾಡಲು ಪ್ರತ್ಯೇಕ ಶುಲ್ಕ, ಮರಣ ಪ್ರಮಾಣಪತ್ರ ಪಡೆಯಲು 50 ರೂ. ಶುಲ್ಕ, ರೈತರ ಸಾಲಕ್ಕೆ ಸ್ಟಾಂಪ್ ಕಾಗದಕ್ಕೆ 100 ರೂ. ಹೀಗೆ ಅನೇಕ ತೆರಿಗೆ, ಶುಲ್ಕ ಹೆಚ್ಚಿಸಲಾಗಿದೆ.
ಕಸದ ತೆರಿಗೆಯಿಂದ 750 ಕೋಟಿ ರೂ. ಹಾಲಿನಿಂದ 1300 ಕೋಟಿ ರೂ., ಪೆಟ್ರೋಲ್-ಡೀಸೆಲ್‌ನಿಂದ 6500 ಕೋಟಿ ರೂ., ಬಸ್ ಟಿಕೆಟ್‌ನಿಂದ 1,000 ಕೋಟಿ ರೂ., ವಾಹನಗಳ ನೋಂದಣಿ ಶುಲ್ಕದಿಂದ 3300 ಕೋಟಿ ರೂ. ನೀರಿನ ಶುಲ್ಕದಿಂದ 600 ಕೋಟಿ ರೂ., ಹೀಗೆ ಹೆಚ್ಚುವರಿ ತೆರಿಗೆ, ಶುಲ್ಕದಿಂದ ಹೆಚ್ಚುವರಿ ಹಣ ಬರುತ್ತಿದೆ ಎಂದರು.
ಬೆಂಗಳೂರಿನಲ್ಲಿ ಅಭಿವೃದ್ಧಿ ಇಲ್ಲ
ಬೆಂಗಳೂರಿನಲ್ಲಿ 1500 ಕ್ಕೂ ಅಧಿಕ ರಸ್ತೆ ಗುಂಡಿಗಳಿವೆ. ಒಂದು ರಸ್ತೆಯಲ್ಲೂ ನೆಮ್ಮದಿಯಾಗಿ ವಾಹನ ಚಲಾಯಿಸಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್‌ಗೆ ಬೆಂಗಳೂರಿಗೆ ಹೊಣೆ ನೀಡಿದಾಗ, ಕನಸು ಕಾಣುವ ಮಾತಾಡಿದ್ದರು. ಶೇ.60-65 ಆದಾಯ ನೀಡುವ ನಗರವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಕಿಂದರಿ ಜೋಗಿಯಂತೆ ಕಥೆ ಕಟ್ಟಿ ಜನರನ್ನು ವಂಚಿಸಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಹೋಗಿ ತೇಲುವ ಬೆಂಗಳೂರು ಹಾಗೂ ಬ್ಯಾಡ್ ಬೆಂಗಳೂರು ಆಗಿದೆ ಎಂದು ದೂರಿದರು.
ಬೆಂಗಳೂರಿನಲ್ಲಿ ಯಾವುದೇ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ರಸ್ತೆ ಗುಂಡಿಗಳಿಂದಾಗಿ ಬಿಎಂಟಿಸಿ ಬಸ್ಸುಗಳ ವೇಗ 15 ಕಿ.ಮೀ. ನಿಂದ 9 ಕಿ.ಮೀ. ಗೆ ಬಂದಿದೆ. ಸ್ಕೈವಾಕ್‌ಗಳು ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿದೆ. ಕೆಟ್ಟ ನಗರಗಳಲ್ಲಿ ಪಟ್ಟಿಯಲ್ಲಿ ಬೆಂಗಳೂರು 3 ನೇ ಸ್ಥಾನಕ್ಕೆ ಬಂದಿದೆ. ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳು 824 ಕಿ.ಮೀ. ಉದ್ದವಿದ್ದು, ಈವರೆಗೆ 5,000 ಕೋಟಿ ರೂ. ಖರ್ಚು ಮಾಡಲಾಗಿದೆ. ಇಷ್ಟೊಂದು ಹಣ ಎಲ್ಲಿಗೆ ಹೋಗಿದೆ? ಎಂದು ಪ್ರಶ್ನೆ ಮಾಡಿದರು.
ಎತ್ತಿನಹೊಳೆ ಯೋಜನೆಗೆ ಒಂದು ಲಕ್ಷ ಕೋಟಿ ರೂ. ಖರ್ಚು ಮಾಡಿದರೂ ಮುಗಿದಿಲ್ಲ. ಇದೇ ರೀತಿ ಸುರಂಗ ರಸ್ತೆ ಯೋಜನೆಯನ್ನು 17,000 ಕೋಟಿ ರೂ. ವೆಚ್ಚ ಎಂದು ಹೇಳಿ ಪ್ರಸ್ತಾಪ ಮಾಡಲಾಗಿದೆ. ಇದಕ್ಕೆ ಟೋಲ್ ವಿಧಿಸಿದರೆ ಯಾರೂ ಬರುವುದಿಲ್ಲ. ಆಗ ಸುರಂಗದಲ್ಲೇ ಕಸವನ್ನು ತುಂಬಬಹುದು. ನಾನು ಅಭಿವೃದ್ಧಿಯ ವಿರೋಧಿಯಲ್ಲ. ಆದರೆ ಸುರಂಗಕ್ಕಾಗಿ ಹಣ ಹಾಳು ಮಾಡಿದರೆ ನಗರದ ಅಭಿವೃದ್ಧಿ ಅಸಾಧ್ಯ ಎಂದರು.
ಅಭಿವೃದ್ಧಿಗೆ ಹೊರೆ ಎಂಬಂತೆ ಇ-ಖಾತಾ ಕ್ರಮ ತಂದಿದ್ದಾರೆ. ಒಂದು ಬಾರಿ ಖಾತೆ ಮಾಡಲು 12,000 ರೂ. ಪಡೆಯುತ್ತಾರೆ. ಯಾವುದೇ ಕಚೇರಿಗೆ ಹೋದರೂ ಸರ್ವರ್ ಡೌನ್ ಎಂದು ಹೇಳುತ್ತಾರೆ. ಒಬ್ಬ ಮಾಲೀಕನಿಗೆ 150 ಬಾರಿ ಮೊಬೈಲ್‌ಗೆ ಒಟಿಪಿ ಬಂದಿದೆ ಎಂದರೆ ಇಂತಹ ವ್ಯವಸ್ಥೆಗೆ ಏನನ್ನಬೇಕು? ಇ-ಖಾತಾ ಎಂದರೆ ಸರಳತೆ ಇರಬೇಕು. ಆದರೆ ಇದರಿಂದ 10,000 ಕೋಟಿ ರೂ. ಅವ್ಯವಹಾರಕ್ಕೆ ದಾರಿಯಾಗಿದೆ ಎಂಬ ಅನುಮಾನವಿದೆ ಎಂದರು.
ಬೆಂಗಳೂರಿನಲ್ಲಿ ಪ್ರವಾಹ ಸಂಕಷ್ಟಕ್ಕೆ ಪರಿಹಾರವೇ ಇಲ್ಲ. ಇನ್ನು ಮುಂದೆ ಬಸ್ ಖರೀದಿ ಜೊತೆಗೆ ದೋಣಿಗಳನ್ನೂ ಖರೀದಿ ಮಾಡಬೇಕಾಗುತ್ತದೆ. ಪ್ರತಿ ಬಾರಿ ಮಳೆ ಬಂದಾಗ ಮರ ಬಿದ್ದು ನಾಲ್ಕೈದು ಜನರು ಸಾಯುತ್ತಿದ್ದಾರೆ. ಕೊಂಬೆಗಳನ್ನು ಕಡಿಯಲು, ಮರಗಳನ್ನು ನಿರ್ವಹಿಸಲು ಬಿಬಿಎಂಪಿ ಬಳಿ ಹಣವಿಲ್ಲ ಎಂದರು.
ಶಾಸಕರಿಗೆ ಅನುದಾನವಿಲ್ಲ
ಹಿಂದೆ ಯಾವಾಗಲೋ ತೆಂಗಿನಕಾಯಿ ಒಡೆದು ಇನ್ನೂ ಕಾಮಗಾರಿ ಶುರುವಾಗಿಲ್ಲ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದ್ದರು. ನನ್ನ ಕ್ಷೇತ್ರಕ್ಕೆ ಇನ್ನೂ 20 ಕೋಟಿ ರೂ. ನೀಡಿಲ್ಲ. ಬಿಜೆಪಿ ಶಾಸಕರಿಗೆ ಅನುದಾನ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲರಿಗೂ ಅನುದಾನ ನೀಡಿದರೆ ಅಭಿವೃದ್ಧಿ ಮಾಡಬಹುದು ಎಂದರು.
ಗ್ಯಾರಂಟಿಗಳನ್ನು ಏನಾದರೂ ಮಾಡಿ. ಆದರೆ ಶಾಲೆ, ಕುಡಿಯುವ ನೀರು, ಆಸ್ಪತ್ರೆ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿ. ಇದರಿಂದ ಜನರಿಗೆ ನ್ಯಾಯ ಸಿಕ್ಕಿಲ್ಲ ಎಂದರು.