ಹಾಸನ: ತಾಳಿ ಕಟ್ಟುವ ವೇಳೆ ವಧು ನನಗೆ ಮದುವೆ ಬೇಡ ಎಂದು ಹಠ ಹಿಡಿದ ಕಾರಣ ಸಂಭ್ರಮದಿಂದ ನಡೆಯುತ್ತಿದ್ದ ಮದುವೆಯಲ್ಲಿ ಏಕಾಏಕಿ ಗೊಂದಲಕ್ಕೆ ಒಳಗಾದ ಘಟನೆ ಹಾಸನ (Hassan) ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಬೂವನಹಳ್ಳಿ ಗ್ರಾಮದ ಯುವತಿ ಹಾಗೂ ಆಲೂರು ತಾಲೂಕಿನ ಯುವಕನ ಮದುವೆ ನಿಶ್ಚಯವಾಗಿತ್ತು.
ಆದರೆ ಮುಹೂರ್ತದ ವೇಳೆ ವಧುವಿಗೆ ಕರೆಯೊಂದು ಬಂದಿದ್ದು, ಅದರ ಬೆನ್ನಲ್ಲೇ ವಧು ನಾನು ಬೇರೆ ಯುವಕನನ್ನು ಪ್ರೀತಿಸುತ್ತಿರುವುದಾಗಿ ಹೇಳಿ, ಈ ಮದುವೆ ಬೇಡ ಎಂದು ಹಠ ಹಿಡಿದಿದ್ದಾಳೆ ಎಂದು ವರದಿಯಾಗಿದೆ.
ನಂತರ ಪಲ್ಲವಿ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಆಕೆಯ ಪೋಷಕರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಯುವತಿ ಕೇಳದೇ ಹೋಗಿದ್ದಾಳೆ.
ಈ ವಿಷಯ ತಿಳಿದು ನಗರಠಾಣೆ ಪೊಲೀಸರು ಮಧ್ಯೆ ಪ್ರವೇಶಿಸಿ ಮಾತುಕತೆ ನಡೆಸಿದ್ದಾರೆ. ಆದರೆ ವಧುವಿನ ಹಠ ನೋಡಿ ವರ ನನಗೂ ಮದುವೆ ಬೇಡ ಎಂದು ಹೊರಟು ಹೋಗಿದ್ದಾನೆ.
ಆಕೆ ತಾನು ಪ್ರೀತಿಸುತ್ತಿದ್ದ ಯುವಕನ ಬಗ್ಗೆ ಪೋಷಕರಿಗೆ ಇದಕ್ಕೂ ಮೊದಲು ತಿಳಿಸಿಯೂ ಇರಲಿಲ್ಲ ಎನ್ನಲಾಗಿದೆ.
ಕಲ್ಯಾಣಮಂಟಪಕ್ಕೆ ನೂರಾರು ಮಂದಿ ಆಗಮಿಸಿದ್ದದ್ದು ಕೊನೇ ಕ್ಷಣದಲ್ಲಿ ಮಗಳು ಮದುವೆ ನಿಲ್ಲಿಸಿದಳು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.