ದೊಡ್ಡಬಳ್ಳಾಪುರ: ತಾಲ್ಲೂಕಿನ ತಿಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರವೆಹಳ್ಳದಲ್ಲಿ ಹರಿದು ಹೋಗುವ ಮಳೆ ನೀರಿಗೆ ತಡೆಯಾಗಿ ಚೆಕ್ ಡ್ಯಾಂಗಳನ್ನು ನಿರ್ಮಿಸುವಂವೆ ರಾಜ್ಯ ರೈತ ಸಂಘದ ಮನವಿ ಮೇರೆಗೆ ಭಾನುವಾರ ಜಿಲ್ಲಾಧಿಕಾರಿ (District Collector) ಎ.ಬಿ.ಬಸವರಾಜು (A.B.Basavaraju) ಅವರು ಗೊರವೆಹಳ್ಳದ ಸಾಲಿನಲ್ಲಿ ರೈತರೊಂದಿಗೆ ಚಾರಣ ನಡೆಸಿದರು.
ಬೆಳಿಗ್ಗೆ 6 ಗಂಟೆಗೆ ರೈತರೊಂದಿಗೆ ಗೊರವೆಹಳ್ಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ಗೊರವೆಳ್ಳದ ಸುತ್ತ ಮುತ್ತಲಿನ ಬೆಟ್ಟಗಳು, ವಿಶಾಲವಾದ ಅರಣ್ಯ ಪ್ರದೇಶದ ಹಸಿರು ರಾಶಿಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು.
ಗೊರವೆಹಳ್ಳಕ್ಕೆ ಮಳೆ ನೀರು ಹರಿಯುವ ಪ್ರದೇಶ, ಮಳೆಗಾಲದಲ್ಲಿ ನೀರು ಹರಿಯುವ ಪ್ರಮಾಣ ಸೇರಿದಂತೆ ಸ್ಥಳೀಯ ರೈತರಿಂದ ಮಾಹಿತಿ ಪಡೆದರು.
ರಾಜ್ಯ ರೈತ ಸಂಘದ ಸ್ಥಳೀಯ ಮುಖಂಡರಾದ ಮುತ್ತೇಗೌಡ, ಶಿರವಾರ ರವಿ, ಟಿ.ಡಿ.ಮುನಿಯಪ್ಪ ಮಾಹಿತಿ ನೀಡಿ, ಗೊರವೆಹಳ್ಳದಲ್ಲಿ ಮಳೆಗಾಲದಲ್ಲಿ ಸುಮಾರು ಹತ್ತು ಅಡಿಗಳಷ್ಟು ಎತ್ತರಕ್ಕೆ ನೀರು ಹರಿದು ಹೋಗುತ್ತದೆ. ತಾಲ್ಲೂಕಿನ ಎರಡು ಹೋಬಳಿಗಳನ್ನು ಬೆಸೆಯುವ ಗೊರವೆಹಳ್ಳದ ಸುತ್ತಮುತ್ತಲು ವಿಶಾಲವಾದ ಅರಣ್ಯ ಇದೆ. ಈ ಹಳ್ಳದಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸುವುದರಿಂದ ಅರಣ್ಯ ಪ್ರದೇಶದಲ್ಲಿನ ಪ್ರಾಣಿ, ಪಕ್ಷಿ, ಈ ಭಾಗದಲ್ಲಿ ಹುಲ್ಲು ಮೇಯಲು ಬರುವ ರಾಸುಗಳಿಗೆ ಕುಡಿಯುವ ನೀರು ದೊರೆಯಲಿದೆ.
ಹಳ್ಳದಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಿದರೆ ಅಂತರ್ಜಲ ವೃದ್ಧಿಯಾಗಲಿದೆ. ಇದರಿಂದ ಹತ್ತಾರು ಗ್ರಾಮಗಳ ಜನರ ಕುಡಿಯುವ ನೀರಿನ ಬವಣೆಯು ನೀಗಲಿದೆ ಎಂದರು.
ಗೊರವೆಹಳ್ಳದಲ್ಲಿ ಸುತ್ತಾಡಿದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು,ಹಳ್ಳದಲ್ಲಿನ ಕಾಡು ಕಲ್ಲುಗಳನ್ನು ಹರಿಯುವ ನೀರಿಗೆ ಅಡ್ಡಲಾಗಿ ರಾಶಿ ಹಾಕುವ ಮೂಲಕ ಚೆಕ್ ಡ್ಯಾಂಗಳನ್ನು ನಿರ್ಮಿಸಿಕೊಡುವ ಕುರಿತಂತೆ ರೈತರಿಗೆ ಭರವಸೆ ನೀಡಿದರು.
ಚೆಕ್ ಡ್ಯಾಂ ನಿರ್ಮಾಣದಿಂದ ಅರಣ್ಯ ಪ್ರದೇಶದಲ್ಲಿನ ಪ್ರಾಣಿ ಸಂಕುಲಕ್ಕೆ ಅನುಕೂಲವಾಗಲಿದೆ ಎಂದರು.