ದೊಡ್ಡಬಳ್ಳಾಪುರ: ತಾಲೂಕಿನ ಮಧುರೆ ಹೋಬಳಿಯಲ್ಲಿ ಕಳೆದ 89 ವರ್ಷಗಳಿಂದ ಶ್ರಾವಣ ಮಾಸದ ಭಜನೆ ನಡೆಯುತ್ತಿದೆ.
ಒಂದು ತಿಂಗಳ ಕಾಲ ನಿರಂತರವಾಗಿ ಮಧುರೆ ಹೋಬಳಿಯ ಗ್ರಾಮಗಳಲ್ಲಿ ಇಸ್ತೂರು ಕೋದಂಡರಾಮಸ್ವಾಮಿ ಭಜನಾ ಮಂಡಲಿ ನೇತೃತ್ವದಲ್ಲಿ ನಡೆಯುವ ಭಜನೆ ಕಾರ‌್ಯಕ್ರಮ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಭಜನೆ ಕಲೆ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ.
ಮಧುರೆ ಹೋಬಳಿಯ ಶ್ರಾವಣ ಮಾಸದ ಭಜನಾ ಕಾರ‌್ಯಕ್ರಮ 1936ರಲ್ಲಿ ಪ್ರಾರಂಭ ವಾಗಿದೆ. ಇಸ್ತೂರು ಗ್ರಾಮದ ಬೈರಹನುಮೇ ಗೌಡ ಎಂಬುವರು ಈ ಭಜನಾ ಕಾರ‌್ಯಕ್ರಮವನ್ನು ಮೊದಲಿಗೆ ಸಂಘಟಿಸಿದ್ದಾರೆ.
ಪ್ರಸ್ತುತ ಇಸ್ತೂರು ಕೋದಂಡರಾಮಸ್ವಾಮಿ ಭಜನಾ ಸಂಘ ಈ ಕಾರ್ಯವನ್ನು ನಿರ್ವಹಣೆ ಮಾಡುತ್ತದೆ. ಚನ್ನಾ ದೇವಿ ಅಗ್ರಹಾರ ಗ್ರಾಮದ ನಂಜೇಗೌಡ ಅಧ್ಯಕ್ಷರು, ಇಸ್ತೂರು ರಾಮಯ್ಯ ಉಪಾಧ್ಯಕ್ಷರು, ಗಂಡರಗೂಳಿಪುರದ ಹನುಮಂತರಾಯಪ್ಪ ಕಾರ್ಯ ದರ್ಶಿ, ಹೊನ್ನಾದೇವಿಪುರ ಗ್ರಾಮದ ಮಹಾದೇವಯ್ಯ ಖಂಜಾಚಿಯಾಗಿದ್ದಾರೆ.
ಈ ಬಾರಿ ಶ್ರಾವಣ ಮಾಸದ ಮೊದಲ ದಿನ ಇಸ್ತೂರು ಗ್ರಾಮದಲ್ಲಿ ಭಜನೆ ಪ್ರಾರಂಭವಾಗಿದೆ. ಶ್ರಾವಣ ಮಾಸದ ಕೊನೆಯ ದಿನ ಮಲ್ಲೋಹಳ್ಳಿ ಗ್ರಾಮದಲ್ಲಿ ಕೊನೆಗೊಳ್ಳುತ್ತದೆ.
ಭಜನೆ ಕಾರ‌್ಯಕ್ರಮದ ಸಮಾರೋಪ ಗೊಲ್ಲಹಳ್ಳಿ ಬೈಲಾಂಜ ನೇಯಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ನಡೆಯುತ್ತದೆ.
ಮಧುರೆ ಹೋಬಳಿಯ ಇಸ್ತೂರು, ಇಸ್ತೂರು ಕಾಲೋನಿ, ಗಂಡರಗೊಳಿಪುರ, ಶ್ಯಾಕಲದೇವನಪುರ, ಗಾಡಿಗರಪಾಳ್ಯ, ಸಿಂಪಾಡಿಪುರ, ಮಲ್ಲೋಹಳ್ಳಿ, ಚನ್ನಾದೇವಿ ಅಗ್ರಹಾರ, ಕನಸವಾಡಿ, ಮಲ್ಲೋಹಳ್ಳಿ, ಮುಪ್ಪಡಿಘಟ್ಟ, ಮದಗೊಂಡನ ಹಳ್ಳಿ, ಚಲ್ಲಹಳ್ಳಿ, ಮಾರಸಂದ್ರ, ಬಂಡಯ್ಯನ ಪಾಳ್ಯ, ತಿಮ್ಮಸಂದ್ರ, ತಿಮ್ಮಸಂದ್ರ ಕಾಲೋನಿ, ಪುಟ್ಟೇನಹಳ್ಳಿ, ಕಮ್ಮಸಂದ್ರ ಗ್ರಾಮಗಳಲ್ಲಿ ಶ್ರಾವಣ ಮಾಸದ ನಿರಂತರ ಭಜನಾ ಕಾರ‌್ಯಕ್ರಮ ನಡೆಯುತ್ತದೆ.
ಶ್ರಾವಣ ಮಾಸದ ಭಜನಾ ಕಾರ್ಯಕ್ರಮದಲ್ಲಿ ಹಾರ್ಮೋನಿಯಂ, ತಬಲ, ತಾಳ ಮುಂತಾದೊಂದಿಗೆ ಕಲಾವಿದರು ಪುರಂದರದಾಸ, ಕನಕದಾಸ, ತತ್ತ್ವ ಪದಕಾರರು, ಶಿಶುನಾಳ ಷರೀಫ್, ಜನಪದರು ಮುಂತಾದವರು ರಚಿಸಿರುವ ಸಾಹಿತ್ಯವನ್ನು ಕಲಾವಿದವರು ಹಾಡುತ್ತಾರೆ.
ಇವರು ಹೆಚ್ಚಿನವರು ಪೌರಾಣಿಕ ನಾಟಕಗಳಲ್ಲಿ ಕಲಾವಿದರಾಗಿ ಅಭಿನಯಿಸಿದವರು.
ಹರಿಕಥಾ ವಿದ್ವಾಂಸರು, ವಿವಿಧ ಗ್ರಾಮಗಳಲ್ಲಿರುವ ಭಜನಾ ಮಂಡಲಿಯ ಸದಸ್ಯರುಗಳು ಶ್ರಾವಣ ಮಾಸದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ಗ್ರಾಮದ ಪ್ರತಿಮನೆಗಳಿಗೂ ಭಜನಾ ತಂಡ ಹೋಗಿ ಸ್ವಲ್ಪ ಸಮಯ ಭಜನೆ ಮತ್ತು ಪೂಜಾ ಕಾರ್ಯಕ್ರಮ ನಡೆಸಿಕೊಡುತ್ತಾರೆ.
ವಿಶೇಷ ವರದಿ; ಹಿರಿಯ ಪತ್ರಕರ್ತ ಪಿ.ಗೋವಿಂದರಾಜು