ದೊಡ್ಡಬಳ್ಳಾಪುರ: ತಾಲೂಕಿನ ಹಾಲು ಉತ್ಪಾದಕರ ಸಹಾಕರ ಸಂಘಗಳ ಡೈರಿಗಳಲ್ಲಿ (Dairies) ಫೀಡ್ (feed) ಕೊರತೆಯಿಂದ ರೈತರು ಪರದಾಡುವಂತಾಗಿದ್ದ ವರದಿ ಕುರಿತು, ಬಮೂಲ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ ಅವರ ಸಕಾಲಿಕ ಸ್ಪಂದನೆಗೆ ಅಧಿಕಾರಿಗಳು ಹೆಚ್ಚೆತ್ತಿದ್ದು, ಫೀಡ್ ಪೂರೈಕೆ ಆರಂಭಿಸಿದ್ದಾರೆ.

ಹೌದು ದೊಡ್ಡಬಳ್ಳಾಪುರ ತಾಲೂಕಿನ ಡೈರಿಗಳಲ್ಲಿ ಫೀಡ್ ದಾಸ್ತಾನು ಇಲ್ಲವಾಗಿ, ಏಪ್ರಿಲ್ 1 ರಿಂದ ಇಂಡೆಂಟ್ ಹಾಕಲಾಗುತ್ತಿದ್ದರು, ಫೀಡ್ ಪೂರೈಕೆ ಇಲ್ಲವಾಗಿತ್ತು. ಇದರಿಂದ ಹಸುಗಳಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿ, ರೈತರು ತೊಂದರೆಗೆ ಸಿಲುಕಿದ್ದರು.

ಈ ಕುರಿತಂತೆ ಬಮೂಲ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ ಅವರು ಹರಿತಲೇಖನಿಗೆ ಪ್ರತಿಕ್ರಿಯೆ ನೀಡಿದ್ದು, ಡೈರಿ ಕಾರ್ಯದರ್ಶಿಗಳು ಮಾರ್ಚ್ ತಿಂಗಳಲ್ಲಿ ದಾಸ್ತಾನು ಮಾಡಿಕೊಳ್ಳದ ಕಾರಣ ಫೀಡ್ಗಳಲ್ಲಿ ಅಭಾವ ಉಂಟಾಗಿದೆ.
ಈ ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಏಪ್ರಿಲ್ ತಿಂಗಳಲ್ಲಿ ಏಕಾಏಕಿ 23 ಸಾವಿರ ಟನ್ ಫೀಡ್ಗೆ ಇಂಡೆಂಟ್ ಹಾಕಿರುವ ಕಾರಣ ರಾಜಾನುಕುಂಟೆ ಘಟಕದಿಂದ ಪೂರೈಕೆ ಮಾಡಲು ವಿಳಂಬವಾಗುತ್ತಿದೆ.
ಸಾಂಗ್ಲಿ ಘಟಕದಿಂದ ಫೀಡ್ ಪೂರೈಕೆಗೆ ಸಿದ್ಧವಿದ್ದರು, ಸ್ಥಳೀಯ ಹಸುಗಳಿಗೆ ಫೀಡ್ ಹೊಂದದ ಕಾರಣ ತಡೆಹಿಡಿಯಲಾಗಿದೆ. ಆದಾಗ್ಯೂ ರಾಜಾನುಕುಂಟೆ ಘಟಕದಿಂದ ಹೆಚ್ಚುವರಿ ಉತ್ಪಾದನಗೆ ಒತ್ತು ನೀಡಿ, ತ್ವರಿತವಾಗಿ ರೈತರಿಗೆ ಫೀಡ್ ಪೂರೈಕೆಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಬಿ.ಸಿ. ಆನಂದ್ ಕುಮಾರ್ ಅವರು ತಿಳಿಸಿದ್ದರು.
ನಿನ್ನೆಯಿಂದಲೇ ಫೀಡ್ ಪೂರೈಕೆ ಆರಂಭ
ಬಿ.ಸಿ.ಆನಂದ್ ಕುಮಾರ್ ಅವರು ನೀಡಿದ ಕಟ್ಟುನಿಟ್ಟಾದ ಸೂಚನೆ ಹಿನ್ನೆಲೆಯಲ್ಲಿ ಹೆಚ್ಚೆತ್ತ ಕೆಎಂಎಫ್ ಹಾಗೂ ಬಮೂಲ್ ಅಧಿಕಾರಿಗಳು ಡೈರಿಗಳಿಗೆ ಫೀಡ್ ಪೂರೈಕೆ ಆರಂಭಿಸಿದ್ದಾರೆ.
ಮಧುರೆ ಹೋಬಳಿಯ ಡೈರಿಗಳಿಗೆ ನಿನ್ನೆ ಬೆಳಗ್ಗೆಯೇ ಫೀಡ್ ಪೂರೈಕೆಯಾಗಿದ್ದು, ಇಂದು ಸಾಸಲು ಹೋಬಳಿಯ ಡೈರಿಗಳಿಗೆ ಪೂರೈಕೆ ಮಾಡಲಾಗುತ್ತಿದೆ.
ಪ್ರಶಂಸೆ
ಇನ್ನೂ ಈ ಕುರಿತಂತೆ ಯುವ ರೈತ ಮಲ್ಲೋಹಳ್ಳಿ ಪುನೀತ್ ಗೌಡ ಅವರು ಬಿ.ಸಿ. ಅನಂದ್ ಕುಮಾರ್ ಅವರ ರೈತಪರ ಕಾಳಜಿಯನ್ನು ಪ್ರಶಂಸಿಸಿದ್ದು, ಹಣ, ಅಧಿಕಾರ ಇದ್ದರೆ ಸಾಲದು, ರೈತಪರ, ಜನಪರ ಕಾಳಜಿ ಇರಬೇಕು ಎಂಬುದಕ್ಕೆ ಬಮೂಲ್ ನಿರ್ದೇಶಕರಾದ ಬಿ.ಸಿ. ಅನಂದ್ ಕುಮಾರ್ ಅವರು ಸಾಕ್ಷಿಯಾಗಿದ್ದಾರೆ.
ರೈತರಿಗೆ ಫೀಡ್ ಅಭಾವದಿಂದ ಉಂಟಾಗುತ್ತಿದ್ದ ಸಮಸ್ಯೆಯನ್ನು ತಿಳಿದ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸುವ ಮೂಲಕ ಬಿ.ಸಿ. ಆನಂದ್ ಕುಮಾರ್ ಅವರಿಗೆ ರೈತರ ಪರ ಕಾಳಜಿ ಎಷ್ಟಿದೆ ಎಂಬುದನ್ನು ಸಾರಿದ್ದಾರೆ. ಅವರ ಈ ಕಾರ್ಯ ಇತರೆ ನಿರ್ದೇಶಕರಿಗೆ ಮಾದರಿಯಾಗಿದೆ ಎಂದು ಪುನೀತ್ ಗೌಡ ಮಲ್ಲೋಹಳ್ಳಿ ಹೇಳಿದ್ದಾರೆ.
ಏನಿದು ಫೀಡ್
ಕರ್ನಾಟಕ ಹಾಲು ಮಹಾಮಂಡಳಿ (KMF) ರೈತರಿಗಾಗಿ ‘ನಂದಿನಿ’ ಬ್ರ್ಯಾಂಡ್ ಅಡಿಯಲ್ಲಿ ಗುಣಮಟ್ಟದ ಪಶು ಆಹಾರವನ್ನು (Cattle Feed) ಪೂರೈಸುತ್ತದೆ. ಇದು ಹಸುಗಳ ಆರೋಗ್ಯ ಮತ್ತು ಹಾಲಿನ ಇಳುವರಿಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಸಮತೋಲಿತ ಪಶು ಆಹಾರವಾಗಿದೆ.
ರೈತರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಮೇವು ಮತ್ತು ಆಹಾರವನ್ನು ಒದಗಿಸಿ, ಹೈನುಗಾರಿಕೆಯನ್ನು ಲಾಭದಾಯಕವಾಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.