ದೊಡ್ಡಬಳ್ಳಾಪುರ: ಮಹಿಳೆಯರನ್ನು ಎಲ್ಲಾ ರೀತಿಯಿಂದಲು ಸಬಲರನ್ನಾಗಿಸುವಲ್ಲಿ ಮಹಿಳಾ ಸಮಾಜ ಮಹತ್ವದ ಪಾತ್ರ ವಹಿಸುತ್ತ ಬಂದಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕೆ.ಪಿ.ಜಗನ್ನಾಥ್ ಹೇಳಿದರು.
ನಗರದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗೂ ಮಹಿಳಾ ಸಮಾಜ ಕಸ್ತೂರಿಬಾ ಶಿಶು ವಿಹಾರದ ವತಿಯಿಂದ ಮಹಿಳಾ ಸಮಾಜದಲ್ಲಿ ಮಂಗಳವಾರ ನಡೆದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲೇ ಭೀಮಕ್ಕ ಅವರು ನಗರದಲ್ಲಿ ಮಹಿಳಾ ಸಮಾಜ ಸ್ಥಾಪನೆ ಮಾಡಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಯೋಜನೆಗಳನ್ನು ರೂಪಿಸಿದ್ದರು. ಭೀಮಕ್ಕ ಅವರ ಕನಸನ್ನು ನನಸು ಮಾಡಲು ಮಹಿಳಾ ಸಮಾಜದ ನಿರ್ದೇಶಕರು ಶ್ರಮಿಸಬೇಕು ಎಂದರು.
ನಗರದ ಸರ್ಕಾರಿ ಆಸ್ಪತ್ರೆಯ ವೈಧ್ಯ ಡಾ.ಅರುಣ್‌ಕುಮಾರ್ ಮಾತನಾಡಿ, ಕೊರೊನಾ ನಂತರದ ದಿನಗಳಲ್ಲಿ ಎಲ್ಲರಲ್ಲೂ ಆರೋಗ್ಯದ ಕಾಳಜಿ ಹೆಚ್ಚಾಗಿದೆ. ಆದರೆ ಆರ್ಥಿಕ ತೊಂದರೆಯಿಂದಾಗಿ ಸಾಕಷ್ಟು ಜನ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳ ಕಡೆಗೆ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ.ಯಾವುದೇ ಆರೋಗ್ಯದ ಸಮಸ್ಯೆಗಳನ್ನು ಪ್ರಾಥಮಿಕ ಹಂತದಲ್ಲೇ ವೈದ್ಯರ ಬಳಿ ಸೂಕ್ತ ಸಲಹೆ, ಚಿಕಿತ್ಸೆಗಳನ್ನು ಪಡೆದರೆ ಖರ್ಚು ಕಡಿಮೆ ಹಾಗೂ ಆರೋಗ್ಯವು ಉತ್ತಮವಾಗಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲು ಇಂದು ಸಾಕಷ್ಟು ಉತ್ತಮ ಸೌಲಭ್ಯಗಳು ದೊರೆಯುತ್ತಿವೆ ಎಂದರು.
ಆರೋಗ್ಯ ತಪಾಸಣ ಶಿಬಿರ ಉದ್ಘಾಟನೆ ಸಭೆಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್.ಪ್ರಭಾ, ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್, ಸರ್ಕಾರಿ ಆಸ್ಪತ್ರೆ ಡಾ.ವಸುಧಾ, ಸಪ್ತಗಿರಿ ಆಸ್ಪತ್ರೆ ವೈಧ್ಯರಾದ ಡಾ.ನಂದಿನಿ, ಡಾ.ಸಾಧಿಕ್, ಡಾ.ನಿಧಿ, ಡಾ.ಅಂಕಿತ, ಮಹಿಳಾ ಸಮಾಜದ ಕಾರ್ಯದರ್ಶಿ ದೇವಕಿ, ಉಪಾಧ್ಯಕ್ಷೆ ಕವಿತಾ, ಖಜಾಂಚಿ ಯಶೋಧ, ನಿರ್ದೇಶಕರಾದ ವರಲಕ್ಷ್ಮೀ, ಗೌರಮ್ಮ, ಗಿರಿಜಾ ಹಾಗೂ ಸರ್ಕಾರಿ ಆಸ್ಪತ್ರೆಯ ಹಿರಿಯ ನರ್ಸ್‌ಗಳು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ