ದೊಡ್ಡಬಳ್ಳಾಪುರ: ಓಮಿಕ್ರಾನ್ ಆತಂಕದ ನಡುವೆ ಕೊವಿಡ್-19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ಅಗತ್ಯವಿದ್ದು, ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಅಗತ್ಯವಾಗಿದೆ. ಆದರೆ 18 ವರ್ಷ ಮೇಲ್ಪಟ್ಟ ಇನ್ನು ಹಲವಾರು ಮಂದಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿರುವುದು ಹಾಗೂ ಕೆಲವು ಮಂದಿ ದಾಖಲೆಗಾಗಿ ಲಸಿಕೆ ಪಡೆಯಲು ಮುಂದಾಗುತ್ತಿರುವುದು ಕಂಡು ಬರುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 8.4 ಲಕ್ಷ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಇದರಲ್ಲಿ 7.59 ಲಕ್ಷ ಮಂದಿಗೆ ಮೊದಲನೇ ಡೋಸ್ (ಶೇ.91) ಹಾಗೂ 6.26 ಲಕ್ಷ ಮಂದಿಗೆ ಎರಡನೇ ಡೋಸ್(ಶೇ.75) ಹಾಕಲಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣ ಹಮ್ಮಿಕೊಳ್ಳಲಾಗಿದ್ದು, ಲಸಿಕಾ ಕೇಂದ್ರಗಳಷ್ಟೇ ಅಲ್ಲದೇ ಅಂಗನವಾಡಿ, ಶಾಲೆಗಳಲ್ಲಿಯೂ ಸಹ ಲಸಿಕೆ ಹಾಕಲಾಗುತ್ತಿದೆ. ಸಧ್ಯಕ್ಕೆ ಲಸಿಕೆ ಪೂರೈಕೆಗೆ ಯಾವುದೇ ಕೊರತೆಯಿಲ್ಲ. ಈ ಹಿಂದೆ ಲಸಿಕಾ ಕೇಂದ್ರಗಳಲ್ಲಿ ಕಂಡು ಬರುತ್ತಿದ್ದ ಲಸಿಕೆಗಾಗಿ ನೂಕು ನುಗ್ಗಲು ಈಗ ಕಾಣ ಬರುತ್ತಿಲ್ಲ.
ಹಾಗಾಗಿ ಲಸಿಕೆ ಹಾಕಿಸಿಕೊಳ್ಳದೇ ಇರುವವರು ಲಸಿಕೆ ಹಾಕಿಸಿಕೊಳ್ಳಲು ಯಾವುದೇ ಅಡೆತಡೆಯಿಲ್ಲ.
ಹಲವರು ಮಂದಿ ಲಸಿಕೆ ಹಾಕಿಸಿಕೊಳ್ಳಲು ಈಗಲೂ ಹಿಂಜರಿಯುತ್ತಿದ್ದಾರೆ. ಶಾಲೆಗಳಲ್ಲಿ ಪೋಷಕರು ಕಡ್ಡಾಯವಾಗಿ ಕೊವಿಡ್ ಲಸಿಕೆ ಪಡೆದಿರಬೇಕು ಎಂದು ಸೂಚನೆ ನೀಡಲಾಗಿದೆ.
ಶಬರಿ ಮಲೆ, ತಿರುಪತಿ, ಘಾಟಿ ದನಗಳ ಜಾತ್ರೆ ಮೊದಲಾದ ಯಾತ್ರಾ ಸ್ಥಳಗಳಲ್ಲಿ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ಎನ್ನುವ ನಿಯಮ ಜಾರಿಯಲ್ಲಿರುವುದರಿಂದ ದಾಖಲೆಗಾಗಿ ಲಸಿಕೆ ಪಡೆಯಲು ಬರುವವರೂ ಇದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ಮುನ್ನ ನೋಂದಣಿ ಮಾಡಿಸಿಕೊಂಡು ಲಸಿಕೆ ಹಾಕಿಸಿಕೊಳ್ಳದೇ ಜಾಗ ಖಾಲಿ ಮಾಡುವ ಪ್ರಯತ್ನಗಳೂ ನಡೆದಿವೆ. ಆದರೆ ಲಸಿಕಾ ಸಿಬ್ಬಂದಿ ಇದಕ್ಕೆ ಆಸ್ಪದ ಕೊಡದೇ ಕಡ್ಡಾಯವಾಗಿ ಲಸಿಕೆ ಹಾಕಿ ಕಳುಹಿಸುತ್ತಿದ್ದಾರೆ.
ದಾಖಲೆಗಾಗಿ ಕಳ್ಳಾಟ ಬೇಡ: ಜಿಲ್ಲೆಯಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ಶೂನ್ಯಕ್ಕೆ ಇಳಿದಿರುವುದು ಆಶಾದಾಯಕ ಬೆಳವಣಿಗೆ. ಕೋವಿಡ್ ಸೋಂಕು ನಿಯಂತ್ರಣ ಮಾಡಲು ಕೋವಿಡ್ ಲಸಿಕೆ ಪ್ರಮುಖ ಪಾತ್ರ ವಹಿಸಲಿದ್ದು, ಲಸಿಕೆಯಿಂದ ಹಲವಾರು ಪ್ರಯೋಜನಗಳಿವೆ. ದಾಖಲೆಗಾಗಿ ಲಸಿಕೆ ಬೇಡ. ಕೋವಿಡ್ ನಿಯಂತ್ರಣವಾಗಿದೆ ಎಂದು ಕೋವಿಡ್ ನಿರ್ಲಕ್ಷ್ಯ ವಹಿಸುವುದು ಬೇಡ. ಲಸಿಕೆ ಹಾಕಿಸಿಕೊಳ್ಳವ ಮೂಲಕ ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕಿದೆ ಎನ್ನುತ್ತಾರೆ ವೈದ್ಯರು.(ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….