ದೊಡ್ಡಬಳ್ಳಾಪುರ, (ಆಗಸ್ಟ್.15); ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡಬಳ್ಳಾಪುರ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಅನನ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತ ದೇಶದ ಸ್ವಾತಂತ್ರ್ಯ ಚಳುವಳಿಗಳಾದ ವಿದುರಾಶ್ವತ್ಥ ಹೋರಾಟ, ಶಿವಪುರ ಧ್ವಜ ಸತ್ಯಾಗ್ರಹ, ಬೆಳಗಾವಿ ಕಾಂಗ್ರೆಸ್ ಅಧಿವೇಶನ, ದಂಡಿ ಉಪ್ಪಿನ ಸತ್ಯಾಗ್ರಹ ಮುಂತಾದ ಹಲವಾರು ಮಹತ್ವದ ಹೋರಾಟಗಳಲ್ಲಿ ದೊಡ್ಡಬಳ್ಳಾಪುರ ಸ್ವಾತಂತ್ರ್ಯ ಹೋರಾಟಗಾರರು ಭಾಗವಹಿಸಿದ್ದರು ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರೆಂದರೆ ಮೈಸೂರು ಕಾಂಗ್ರೆಸ್ ಮೊದಲ ಅಧ್ಯಕ್ಷರಾದ ಟಿ.ಸಿದ್ದಲಿಂಗಯ್ಯ, ಅಂತರರಾಷ್ಟ್ರೀಯ ಚಿತ್ರ ಕಲಾವಿದ ರುಮಾಲೆ ಚನ್ನಬಸವಯ್ಯ, ಎಚ್.ಮುಗುವಾಳಪ್ಪ, ರುಮಾಲೆ ಭದ್ರಯ್ಯ, ನಾ.ನಂಜುಂಡಯ್ಯ, ಡಿ.ದಾನಪ್ಪ, ಟಿ.ಸುನಂದಮ್ಮ, ರಾಮಯ್ಯ ಮೇಷ್ಟ್ರು ಮುಂತಾದ ನೂರಾರು ಸ್ವಾತಂತ್ರ್ಯ ಹೋರಾಟಗಾರರು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿಯೂ ಚಳುವಳಿಯಲ್ಲಿ ಭಾಗವಹಿಸಿದ್ದರು.
ದೊಡ್ಡಬಳ್ಳಾಪುರಕ್ಕೆ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಕಸ್ತೂರ ಬಾ ಮುಂತಾದವರು ದೊಡ್ಡಬಳ್ಳಾಪುರಕ್ಕೆ ಬರಲುಸ್ವಾತಂತ್ರ್ಯ ಹೋರಾಟಗಾರರಾದ ಟಿ.ಸಿದ್ದಲಿಂಗಯ್ಯ, ರುಮಾಲೆ ಚನ್ನಬಸಪ್ಪ, ಎಚ್.ಮುಗುವಾಳಪ್ಪ ಮುಂತಾದವರು ಕಾರಣರಾಗಿದ್ದಾರೆ.
ಇವರುಗಳ ಸ್ಫೂರ್ತಿಯಿಂದ ದೊಡ್ಡಬಳ್ಳಾಪುರ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಂತೆ ಮಾಡಿದರು.
ಭಾರತ ಸ್ವಾತಂತ್ರ್ಯ ನಂತರವು ದೊಡ್ಡಬಳ್ಳಾಪುರ ಸ್ವಾತಂತ್ರ್ಯ ಹೋರಾಟಗಾರರು ಹಲವಾರು ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ನಿರತರಾಗಿದ್ದರು. ರೈತರ ಮತ್ತು ದುರ್ಬಲರ ಪರವಾದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.
ಪ್ರಾಮಾಣಿಕತೆ ಮತ್ತು ಆದರ್ಶದ ಮೌಲ್ಯಗಳೊಂದಿಗೆ ಜೀವಿಸಿದ್ದ ದೊಡ್ಡಬಳ್ಳಾಪುರ ಸ್ವಾತಂತ್ರ್ಯ ಹೋರಾಟಗಾರರು ತಾಲ್ಲೂಕಿನ ಜನರ ಮೇಲೆ ಅಪಾರ ಪ್ರಭಾವ ಬೀರಿದ್ದರು. ಇವರ ಪ್ರೇರಣೆ ಮತ್ತು ಪ್ರಭಾವದಿಂದ ಹಲವು ಜನಪರ ಚಳುವಳಿಗಳಲ್ಲಿ ಸಾವಿರಾರು ಜನರು ಭಾಗವಹಿಸುತ್ತಿದ್ದರು ಎಂದು ಇಂದಿಗೂ ಜನರು ಸ್ಮರಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ, ಪ್ರತಿಗಳಾದ ಮುನಿರಾಜು, ನಾಗರತ್ನಮ್ಮ, ಷಫೀರ್.
ಕಸಬಾ ಹೋಬಳಿಅಧ್ಯಕ್ಷ ಪಿ.ಡಿ.ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ಸಾಸಲು ಹೋಬಳಿ ಅಧ್ಯಕ್ಷ ಜಿ.ನಾಗರಾಜು, ತೂಬಗೆರೆ ಹೋಬಳಿ ಕೋಶಾಧ್ಯಕ್ಷ ಉದಯರಾಧ್ಯ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಗಂಗರಾಜ ಶಿರವಾರ, ದರ್ಗಾಜೋಗಿಹಳ್ಳಿ ಮಲ್ಲೇಶ್
ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನಾಗಾಜ್, ತಾಲ್ಲಾಕು ಅಧ್ಯಕ್ಷ ಶಶಿಧರ್, ಯುವಘಟಕದ ದರ್ಶನ್, ಮಂಜುನಾಥ ಕಲಾ ಸಂಘದ ಚಿತ್ರಲಿಂಗಯ್ಯ, ಮಂಜುನಾಥ್, ನಾಗದಳ ನಟರಾಜು ಮುಂತಾದವರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….