Doddaballapura; ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ.. ಸಾಧಕರಿಗೆ ಸನ್ಮಾನ, ಶಿಸ್ತಿನ ಕೊರತೆ

ದೊಡ್ಡಬಳ್ಳಾಪುರ, (ಆಗಸ್ಟ್.15); ನಾವೆಲ್ಲರೂ ಜವಾಬ್ದಾರಿಯನ್ನು ಅರಿತಿರುವ ಪ್ರಜ್ಞಾವಂತ ನಾಗರಿಕರಾದಾಗ ದೇಶದ ಸ್ವಾತಂತ್ರ್ಯಕ್ಕೆ ಅರ್ಥವಿದೆ. ದೇಶವನ್ನು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಮಂಚೂಣಿಗೆ ಕೊಂಡೊಯ್ಯಲು ಹಾಗೂ ಪ್ರಸ್ತುತ ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ ಮತ್ತು ಧಾರ್ಮಿಕ ಆಸಹಿಷ್ಣುತೆಯಂತಹ ಪಿಡುಗುಗಳಿಂದ ದೇಶವನ್ನು ಮುಕ್ತಗೊಳಿಸಲು ಪಣತೊಟ್ಟು ಶ್ರಮಿಸುವ ಮೂಲಕ ದೇಶ ಸೇವೆಯನ್ನು ಮಾಡಬೇಕಿದೆ  ಎಂದು ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ ಹೇಳಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ 78ನೇ ಭಾರತ ಸ್ವಾತಂತ್ರತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕೆ ದುಡಿದ ಮಹನೀಯರನ್ನು ನಾವು ಸದಾ ಸ್ಮರಿಸಬೇಕಿದೆ. ಕರ್ನಾಟಕ ರಾಜ್ಯದಲ್ಲಿಯೂ ಸಹ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಅನೇಕ ಹೋರಾಟಗಳು ನಡೆದಿದೆ. ಬ್ರಿಟೀಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮನವರ ಸಂಸ್ಥಾನದ ಉಳಿವಿಗಾಗಿ ಮಾಡಿದ ಹೋರಾಟ, ಸ್ವಾತಂತ್ರ್ಯಕೋಸ್ಕರ ನೇಣುಗಂಬವನ್ನು ಏರಿದ ಸಂಗೊಳ್ಳಿ ರಾಯಣ್ಣ ರವರ ಜನ್ಮದಿನ ಈ ದಿನವೇ ಆಗಿದ್ದು, ಅವರ ತ್ಯಾಗವನ್ನು ನೆನೆಯಬೇಕಿದೆ. 

ದೇಶಭಕ್ತಿ ಮತ್ತು ದೇಶ ಸೇವೆ ಕೇವಲ ಸ್ವಾತಂತ್ರೋತ್ಸವದ ಮತ್ತು ಗಣರಾಜ್ಯೋತ್ಸವದ ಸಂದರ್ಭಗಳಲ್ಲಿ ನೆನಪು ಮಾಡಿಕೊಳ್ಳುವ ಕಾರ್ಯಕ್ರಮವಾಗದೆ ನಮ್ಮ ಬದುಕಿನ ಪ್ರತಿಯೊಂದು ಕ್ಷಣದಲ್ಲೂ ಈ ದೇಶದ ಏಳಿಗೆಗಾಗಿ ನಾಗರಿಕರ ಕಲ್ಯಾಣಕ್ಕಾಗಿ ದುಡಿಯುವುದರ ಮೂಲಕ ದೇಶ ಸೇವಕರಾಗೋಣ ಪ್ರತಿಯೊಬ್ಬ ಭಾರತೀಯರ ಬದುಕು ಹಸನಾದಾಗ ಮಾತ್ರ ಭಾರತ ದೇಶದ ಪ್ರಗತಿ ಆಗುತ್ತದೆ ಎಂಬ ಅರಿವು ನಮ್ಮಲ್ಲಿ ಇರಬೇಕು ಎಂದರು. 

ಈ ವೇಳೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಾದ  ಸಿದ್ದಯ್ಯ (ಶಿಕ್ಷಣ), ಹಳ್ಳಿ ರೈತ ಅಂಬರೀಶ್ (ಕೃಷಿ), ಅಶ್ವತ ನಾರಾಯಣ (ರಂಗಭೂಮಿ), ಅಂಜನ್ ಗೌಡ (ಸಾಹಿತ್ಯ), ಡಾ.ರಾಜು.ಜಿ. (ವೈದ್ಯಕೀಯ), ಹಿತೇಶ್.ಜಿ.(ಎನ್.ಸಿ.ಸಿ), ಜಯಕುಮಾರ್ (ಶುಶ್ರೂಷೆ), ಕೊತ್ತೂರಪ್ಪ (ಪತ್ರಿಕೋದ್ಯಮ) ಅವರನ್ನು ಸನ್ಮಾನಿಸಲಾಯಿತು.

ಇವರೊಂದಿಗೆ ತಾಲೂಕಿನಿಂದ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪಡೆದ ಕೆ.ಎಂ.ಕೃಷ್ಣಮೂರ್ತಿ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾಗಿರುವ ಟಿ.ಎಚ್.ಲವಕುಮಾರ್, ಸಂಗೀತ ಅಕಾಡೆಮಿ ಸದಸ್ಯೆ ಡಿ.ಆರ್.ನಿರ್ಮಲ, ಜಾನಪದ ಅಕಾಡೆಮಿ ಸದಸ್ಯ ಹುಲಿಕುಂಟೆ ಮೂರ್ತಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

2022-23ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ವಿತರಿಸಲಾಯಿತು.

ಸಮಾರಂಭದಲ್ಲಿ ಶಾಸಕ ಧೀರಜ್ ಮುನಿರಾಜು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ನಿಕಟ ಪೂರ್ವ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್, ತಹಶೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷೆ ವಿಭಾ ವಿದ್ಯಾರಾಥೋಡ್, ನಗರಸಭೆ ಪೌರಾಯುಕ್ತ ಕಾರ್ತಿಕ್ ಈಶ್ವರ್, ತಾಲೂಕು ಪಂಚಾಯಿತಿ ಕಾರ್‍ಯನಿರ್ವಾಹಕ ಅಧಿಕಾರಿ ಎನ್.ಮುನಿರಾಜು, ಕ್ಷೇತ್ರಶಿಕ್ಷಣಾಧಿಕಾರಿ ಸೈಯದ್ ಅನೀಸ ಸೇರಿದಂತೆ ನಗರಸಭಾ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಶ್ರೀನಿವಾಸ್ ನೇತೃತ್ವದಲ್ಲಿ, ಎನ್‌ಸಿಸಿ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಬ್ಯಾಂಡ್‌ಸೆಟ್‌ಗಳ 1500 ಕ್ಕೂ ಹೆಚ್ಚು ಮಂದಿಯಿಂದ ಪಥಸಂಚಲನ ನಡೆಸಲಾಯಿತು.

ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳು ನಡೆದವು.

ಶಿಸ್ತಿನ ಕೊರತೆ: ಇಲ್ಲಿ ಆಚರಿಸಲ್ಪಟ್ಟ ಸ್ವಾತಂತ್ರ್ಯ ದಿನಾಚರಣೆಯು ಅವ್ಯವಸ್ಥೆಯ ಆಗರವಾಗಿ ಜನಸಾಮಾನ್ಯರಿಂದ ಟೀಕೆಗೊಳಗಾಯಿತು.

ಮೊದಲಿಗೆ ಕಾರ್ಯಕ್ರಮದಲ್ಲಿ ಶಿಸ್ತಿನ ಕೊರತೆ ಎದ್ದು ಕಾಣುತ್ತಿತ್ತು. ಒಂಬತ್ತು ಗಂಟೆಯಾದರೂ ಕೂಡ ಶಾಲಾ ಮಕ್ಕಳು ಇನ್ನೂ ಆಗಮಿಸುತ್ತಿದ್ದರು. ಅತಿಥಿಗಳು ಬಂದಿದ್ದೇ ತಡವಾಗಿ. ಇನ್ನು ಕಾರ್ಯಕ್ರಮ ನೋಡಲು ಬಂದಿದ್ದ ಜನ ತಮಗೆ ಬೇಕಾದಲೆಲ್ಲ ನಿಂತಿದ್ದರು.

ಶಿಸ್ತಿಗೆ ಹೆಸರಾದ ಎನ್.ಸಿ.ಸಿ.ಯ ಹಿರಿಯ ವಿದ್ಯಾರ್ಥಿಗಳೇ ತಮಗೆ ಬೇಕಾದಂತೆ ತಿರುಗಾಡುತ್ತಿದ್ದರು.

ಒಟ್ಟಿನಲ್ಲಿ ಶಿಸ್ತಿನ ಚೌಕಟ್ಟಿನೊಳಗೆ ನಡೆಯಬೇಕಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಶಿಸ್ತಿನ ಚೌಕಟ್ಟಿನಲ್ಲಿ ಇರದೇ ಇದ್ದುದು ಬಾರೀ ಟೀಕೆಗೆ ಗುರಿಯಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….