ಧಾರವಾಡ, (ಆ.25): ಮಹಾನಗರ ಹಾಗೂ ಜಿಲ್ಲೆಯಲ್ಲಿ ನಿಷೇಧಿತ ಪಿಓಪಿ ಗಣಪತಿ ವಿಗ್ರಹಗಳ ದಾಸ್ತಾನು ಇರುವ ಕುರಿತು ಜಿಲ್ಲಾಡಳಿತಕ್ಕೆ ಸಾರ್ವಜನಿಕರಿಂದ ಮಾಹಿತಿ ಲಭಿಸಿದ್ದರಿಂದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ನಿರ್ದೇಶನದಂತೆ ಉಪವಿಭಾಗಾಧಿಕಾರಿ ಅಶೋಕ ತೆಲಿ ನೇತೃತ್ವದ ಅಧಿಕಾರಿಗಳ ತಂಡವು ಧಾರವಾಡ ನಗರದ ವಿವಿಧ ವಿಗ್ರಹ ದಾಸ್ತಾನು ಕೇಂದ್ರಗಳ ಮೇಲೆ ದಿಢೀರ್ ದಾಳಿ ಮಾಡಿ, ಪಿಓಪಿ ವಿಗ್ರಹ ಕುರಿತು ಪರಿಶೀಲಿಸಿತು.
ಧಾರವಾಡ ಸಿ.ಬಿ.ನಗರದ ಲಿಂಗಾಯತ ಭವನ ಪಕ್ಕದ ನಿರ್ಮಾಣ ಕಟ್ಟಡದಲ್ಲಿ ಮಂಜುನಾಥ ಬೆಳಗಾಂವಕರ ಅವರು ಮಾರಾಟಕ್ಕಾಗಿ ಸಂಗ್ರಹಿಸಿದ್ದ ಗಣಪತಿ ವಿಗ್ರಹಗಳ ದಾಸ್ತಾನು ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಲಾಯಿತು.
ಬಹುತೇಕ ವಿಗ್ರಹಗಳು ಪಿಓಪಿ, ಮಣ್ಣು ಮಿಶ್ರಿತ ಪಿಓಪಿ, ಕೃತಕ ಬಣ್ಣ ಲೇಪಿತ, ಉಸುಕು ಮಿಶ್ರಿತ ಪಿಓಪಿ ಗಣಪತಿ ವಿಗ್ರಹಗಳು ಕಂಡು ಬಂದಿದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ವಿಗ್ರಹಗಳ ಮಾದರಿ ವಸ್ತುಗಳನ್ನು ಪ್ರಯೋಗಾಲಯದ ಪರೀಕ್ಷೆಗಾಗಿ ಸಂಗ್ರಹಿಸಿದರು.
ನಂತರ ಪರಿಸರ ಭವನದ ಮುಂಭಾಗದ ಕಟ್ಟಡದ ನೆಲ ಮಹಡಿಯಲ್ಲಿ ಸಂಗ್ರಹಿಸಿದ್ದ ಪಿಓಪಿ ಗಣಪತಿ ವಿಗ್ರಹಗಳ ಕೇಂದ್ರಕ್ಕೆ ಭೇಟಿ ನೀಡಿ, ಅಧಿಕಾರಿಗಳ ತಂಡ ಪರಿಶೀಲಿಸಿತು. ಇಲ್ಲಿದ್ದ ಶೇ. 90 ರಷ್ಟು ವಿಗ್ರಹಗಳು ಪಿಓಪಿ ವಿಗ್ರಹಗಳಾಗಿರದ್ದರಿಂದ ತಕ್ಷಣ ಎಲ್ಲ ವಿಗ್ರಹಗಳನ್ನು ಜಪ್ತಿ ಮಾಡಿ, ಸಾಮಾನ್ಯ ಕೇಂದ್ರಕ್ಕೆ ಸಾಗಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಎಸಿ ಅಶೋಕ ತೆಲಿ ಅವರು ಸೂಚಿಸಿದರು. ಮತ್ತು ಮಾರಾಟಗಾರನ ಮೇಲೆ ಕಾನೂನು ಕ್ರಮ ಜರುಗಿಸಲು ತನಿಖೆ ಮಾಡಿ, ಪ್ರಕರಣ ದಾಖಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಅವರು ತಿಳಿಸಿದರು.
ವಿವಿಧ ಕಡೆಗಳಲ್ಲಿನ ಗಣಪತಿ ಮೂರ್ತಿ ಮಾರಾಟ ಮಳಿಗೆಗೆ ಭೇಟಿ ನೀಡಿ ಪಿಓಪಿ ಗಣಪತಿ ವಿಗ್ರಹಗಳನ್ನು ಅಧಿಕಾರಿಗಳು ಸಿಜ್ ಮಾಡಿದರು.
ನಂತರ ಉಪ ವಿಭಾಗಾಧಿಕಾರಿ ಅಶೋಕ ತೆಲಿ ಮಾತನಾಡಿ, 2016ರ ಕಾಯಿದೆ ಪ್ರಕಾರ ಪಿಒಪಿ ಗಣಪತಿ ಬ್ಯಾನ್ ಆಗಿದೆ ಆದರೂ ಕೆಲವಡೆ ಪಿಒಪಿ ಬಂದಿವೆ ಅಂತಾ ಮಾಹಿತಿ ಇದೆ ಈಗಾಗಲೇ ಸಾಕಷ್ಟು ಜಾಗೃತಿ ಮಾಡಿದ್ದೇವೆ. ಆದರೂ ಕೆಲವೆಡೆ ವಿಗ್ರಹಗಳು ಇರುವ ಮಾಹಿತಿಗಳು ಬರುತ್ತಿವೆ. ಅಧಿಕಾರಿಗಳ ತಂಡ ಖುದ್ದು ಪರಿಶೀಲನೆ ಮಾಡುತ್ತಿದೆ. ಪೊಲೀಸ್, ಪಾಲಿಕೆ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಸಹಯೋಗದಲ್ಲಿ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಜನರು ಸಹ ಜಾಗೃತ ರಾಗಿ ಪಿಒಪಿ ಗಣಪತಿ ವಿಗ್ರಹ ತೆಗೆದುಕೊಳ್ಳಬಾರದು ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಜಗದೀಶ ಐ.ಎಚ್. ಅವರು ಮಾತನಾಡಿ, ಮಣ್ಣಿನ ವಿಗ್ರಹ ಭಾರ ಇರುತ್ತವೆ. ಪಿಒಪಿ ಗಣಪತಿ ಭಾರ ಇರುವುದಿಲ್ಲ. ತೂಕದ ವ್ಯತ್ಯಾಸದಲ್ಲಿ ಗೊತ್ತಾಗುತ್ತದೆ. ಪಿಓಪಿ ಅಥವಾ ಮಣ್ಣಿನ ವಿಗ್ರಹ ಕುರಿತು ಸಂಶಯ ಬಂದಲ್ಲಿ ವಿಗ್ರಹವನ್ನು ಪರೀಕ್ಷೆ ಮಾಡಲು ಮಾಹಿತಿ ಪಡೆಯುತ್ತೆವೆ. ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಕ್ರಮ ಕೈಗೊಳ್ಳುತೆವೆ ಎಂದು ಅವರು ಹೇಳಿದರು.
ಮಹಾನಗರ ಪಾಲಿಕೆಯ ಪರಿಸರ ಅಧಿಕಾರಿ ಸಂತೋಷ ಅವರು ಮಾತನಾಡಿ, ಪಿಓಪಿ ವಿಗ್ರಹಗಳ ಮಾರಾಟ, ಸಾಗಾಣಿಕೆ ಆಗದಂತೆ ಪಾಲಿಕೆಯ ಆಯುಕ್ತರ ನಿರ್ದೇಶನದಂತೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಗಳನ್ನು ರಚಿಸಲಾಗಿದೆ. ಪಿಓಪಿ ವಿಗ್ರಹಗಳನ್ನು ಜಪ್ತಿ ಮಾಡಿ, ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ದಿಢೀರ್ ದಾಳಿಯಲ್ಲಿ ಕಂದಾಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾನಗರ ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….