ಮೈಸೂರು, (ಆ.28); ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನ ಸರ್ಕಾರಿ ಭವನದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಇಸ್ರೋಗೆ ಭೇಟಿ ನೀಡಲು ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮಗೆ ಸ್ವಾಗತ ಮಾಡಲು ಆಗಮಿಸುವುದು ಬೇಡ ಎಂದು ಸೂಚಿಸಿದ್ದರು. ಆದ್ದರಿಂದ ನಾವು ಸ್ವಾಗತಕ್ಕೆ ತೆರಳಲಿಲ್ಲ ಎಂದರು.
ರಾಜ್ಯದಲ್ಲಿ ಬರದ ಛಾಯೆಯಿರುವ ಬಗ್ಗೆ ಸಚಿವ ಸಂಪುಟ ಉಪ ಸಮಿತಿಯ ಸಭೆ ಇಂದು ಅಥವಾ ನಾಳೆ ನಡೆಯಲಿದ್ದು, ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಿ, ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೋಡ ಬಿತ್ತನೆ ಇಂದಿನವರೆಗೂ ಎಲ್ಲಿಯೂ ಯಶಸ್ವಿಯಾಗಿಲ್ಲ. ಬರಗಾಲ ಘೋಷಣೆಯಾದ ಮೇಲೆ ಕೇಂದ್ರ ಸರ್ಕಾರದವರಿಗೆ ತಿಳಿಸಲಾಗುವುದು. ಕೇಂದ್ರ ಸರ್ಕಾರದವರು ಪರಿಶೀಲಿಸಿದ ನಂತರ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳ ಪ್ರಕಾರ ನೆರವು ನೀಡುತ್ತಾರೆ ಎಂದರು. ಬರಗಾಲ ಎಂದು ಘೋಷಣೆಯಾದ ನಂತರ ಆ ತಾಲ್ಲೂಕುಗಳಲ್ಲಿ ಬರ ಪರಿಹಾರವಾಗಿ ಜನರಿಗೆ ಕೆಲಸ, ಮುಂತಾದ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದರು.
ಗೃಹಲಕ್ಷ್ಮೀ ದೇಶದಲ್ಲಿಯೇ ದೊಡ್ಡ ಕಾರ್ಯಕ್ರಮ: ದೇಶದಲ್ಲಿಯೇ ಇದು ದೊಡ್ಡ ಕಾರ್ಯಕ್ರಮ. ವರ್ಷದಲ್ಲಿ ಸುಮಾರು 32,ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಈ ವರ್ಷ ಸುಮಾರು 18 ಸಾವಿರ ಕೋಟಿ ರೂ. ಗಳು ವೆಚ್ಚವಾಗಲಿದೆ. 1.33 ಕೋಟಿ ಲಕ್ಷ ಕುಟುಂಬಗಳ ಯಜಮಾನಿಗೆ 2000 ರೂ. ನೀಡಲಾಗುತ್ತಿದೆ.ಒಂದು ತಿಂಗಳಿಗೆ 4-5 ಸಾವಿರ ರೂ.ಗಳು ಒಂದು ಕುಟುಂಬ ಕ್ಕೆ ದೊರೆಯಲಿದೆ. ಇದರಿಂದ ಅವರ ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಅವರ ಕೈಯಲ್ಲಿ ದುಡ್ಡು ಇರುವುದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ಎಲ್ಲಿ ಕೊಂಡುಕೊಳ್ಳುವ ಶಕ್ತಿ ಹೆಚ್ಚಿರುತ್ತದೆಯೋ ಅಲ್ಲಿ ಜಿಡಿಪಿ ಕೂಡ ಬೆಳವಣಿಗೆ ಆಗುತ್ತದೆ ವರ್ಷಕ್ಕೆ ಉದ್ಯೋಗ ಸೃಷ್ಟಿಯೂ ಆಗುತ್ತದೆ ಎಂದರು.
ಬಿಜೆಪಿ ಕರ್ನಾಟಕದಲ್ಲಿ ದಿವಾಳಿಯಾಗಿದೆ: ತಮ್ಮ ಪಕ್ಷದವರನ್ನೇ ಪ್ರಧಾನಿಗಳು ಬರಮಾಡಿಕೊಂಡಿಲ್ಲದ್ದರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಕರ್ನಾಟಕದಲ್ಲಿ ದಿವಾಳಿಯಾಗಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನಗಳಾದರೂ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ. ಕರ್ನಾಟಕದ ಇತಿಹಾಸದಲ್ಲಿ ವಿರೋಧ ಪಕ್ಷಕ್ಕೆ ಇಂಥ ಪರಿಸ್ಥಿತಿ ಎದುರಾಗಿರಲ್ಲಿಲ್ಲ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….