ದೊಡ್ಡಬಳ್ಳಾಪುರ, (ಜುಲೈ.14): ಗುರುವಾರ ರಾತ್ರಿ ತೂಬಗೆರೆ ಗ್ರಾಮದಲ್ಲಿ ಖಾಸಗಿಶಾಲೆ ಮತ್ತು ಶನಿಮಹಾತ್ಮ ದೇವಾಲಯದಲ್ಲಿ ಕಳ್ಳತನವಾಗಿದೆ. ಶಾಲೆಯ ಪ್ರಾಂಶುಪಾಲರ ಕೊಠಡಿ ಮತ್ತು ಕಚೇರಿಗೆ ಕಳ್ಳರು ನುಗ್ಗಿದ್ದಾರೆ. ಕೊಠಡಿಯಲ್ಲಿದ್ದ ಕಪಾಟುಗಳನ್ನು ದೋಚಿರುವ ಕಳ್ಳರು ಕಡತಗಳನ್ನು ಎಸೆದಿದ್ದಾರೆ.
ಉಪ ಪ್ರಾಂಶುಪಾಲರ ಕೊಠಡಿಯಿಂದ ಸುಮಾರು 15 ಸಾವಿರ ರೂ. ಮತ್ತೊಂದು ಕೊಠಡಿಯಲ್ಲಿದ್ದ ಸುಮಾರು 6 ಸಾವಿರ ರೂ. ಹಾಗೂ ಸಿಸಿಟಿವಿ ಕ್ಯಾಮೆರಾ ರೆಕಾರ್ಡಿಂಗ್ಗಳನ್ನು ಸಂಗ್ರಹಿಸಿಟ್ಟಿದ್ದ ಡಿವಿಆರ್ ಬಾಕ್ಸ್ನೊಂದಿಗೆ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಲ್ಲದೆ ಶಾಲೆಯ ಸಮೀಪವಿರುವ ಶನಿ ಮಹಾತ್ಮ ದೇವಾಲಯವು ಸಹ ಬಾಗಿಲನ್ನು ಮುರಿದು ಕಬ್ಬಿಣದ ಸರಳುಗಳನ್ನು ಬಳಸಿ ಒಳಗಡೆ ಪ್ರವೇಶಿಸಿ ಕಾಣಿಕೆ ಹುಂಡಿಯನ್ನು ಹಾಗೂ ಬೆಲಬಾಳುವ ವಸ್ತುಗಳನ್ನು ದೋಚಿದ್ದಾರೆ.
ಈ ಕುರಿತು ಮಾಹಿತಿ ಪಡೆದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಪಂಕಜ ತೂಬಗೆರೆ ಗ್ರಾಮಕ್ಕೆ ಭೇಟಿ ನೀಡಿ ಶಾಲೆ ಮತ್ತು ದೇವಾಲಯವನ್ನು ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಇತ್ತೀಚಿನ ದಿನಗಳಲ್ಲಿ ಗ್ರಾಮದ ಸುತ್ತಮುತ್ತ ದೇವಾಲಯಗಳು ಹಾಗೂ ಒಂಟಿ ಮನೆಗಳಲ್ಲಿ ಕಳ್ಳತನವಾಗುತ್ತಿರುವ ಘಟನೆಗಳು ನಡೆಯುತ್ತಿವೆ ಆದ್ದರಿಂದ ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕೆಂದು ಮನವಿ ಸಲ್ಲಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….