ದೆಹಲಿ: ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh)ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಸಿಂಗ್ ಅವರನ್ನು ದೆಹಲಿಯ ಏಮ್ಸ್‌ನಲ್ಲಿ ದಾಖಲಿಸಲಾಗಿತ್ತು. ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಪಶ್ಚಿಮ ಪಂಜಾಬ್‌ನ ಗಾಡ್‌ನಲ್ಲಿ 1932ರ ಸೆಪ್ಟೆಂಬರ್ 26ರಂದು ಸಿಂಗ್ ಜನನ. ದೇಶ ವಿಭಜನೆ ನಂತರ ಅವರ ಜನ್ಮಸ್ಥಳ ಪಾಕಿಸ್ತಾನದ ಪಾಲಾಗಿದೆ. ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ಪುತ್ರ ರಾದ ಸಿಂಗ್, ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಅಜ್ಜಿ ಬಳಿ ಬೆಳೆದರು.
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. ಆಗ ಸಿಂಗ್ ಕುಟುಂಬ ಗಾಡ್‌ನಿಂದ ಅಮೃತಸರಕ್ಕೆ ವಲಸೆ ಬಂತು. ಆಗ ಸಿಂಗ್ 13 ವರ್ಷದ ಬಾಲಕ. ಸಿಂಗ್ ಬಾಲ್ಯದ ಬಗ್ಗೆ ಅವರ ಕುಟುಂಬದ ಹಳೆಯ ಮಿತ್ರ ರಜ್ಜಿಂದರ್ ಮಾಧ್ಯಮವೊಂದರಲ್ಲಿ ವಿವರಿಸಿದ್ದು, ‘ಆಗಿನ ದಿನಗಳಲ್ಲಿ ಅವರ ಕುಟುಂಬ ಬಡತನದ ಬೇಗೆಯಿಂದ ಬಳಲಿತ್ತು.
ಅವರ ತಂದೆಗೆ ಸಣ್ಣದೊಂದು ಕೆಲಸವಿತ್ತು. ಅವು ಕಷ್ಟದ ದಿನಗಳು. ಊಟಕ್ಕೂ ಕಷ್ಟ. ಬರೀಗಾಲಲ್ಲಿ ಸಿಂಗ್ ಶಾಲೆಗೆ ಹೋಗುತ್ತಿದ್ದರು. ಆ ಮನೆಗೆ ವಿದ್ಯುತ್ ಸಂಪರ್ಕ ಸಹ ಇರಲಿಲ್ಲ. ಹೀಗಾಗಿ ಬೀದಿ ದೀಪದ ಕೆಳಗೆ ಕೂತು ಸಿಂಗ್ ಓದುತ್ತಿದ್ದರು’ ಎಂದಿದ್ದರು. ವಿದ್ಯಾರ್ಥಿ ವೇತನ ಪಡೆದೇ ದೇಶ ವಿದೇಶಗಳ ಪ್ರತಿಷ್ಠಿತ ಕೇಂಬ್ರಿಡ್ಜ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿದ ಹೆಗ್ಗಳಿಕೆ ಸಿಂಗ್ ಅವರದ್ದಾಗಿದೆ.

ಡಾ.ಸಿಂಗ್ ಅವರು ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದರು. ನಂತರ, 2004ರಿಂದ 2014ರ ವರೆಗೆ ಪ್ರಧಾನಿಯಾಗಿದ್ದರು. ಆರು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಸಿಂಗ್ ಅವರು, ಒಮ್ಮೆಯೂ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಲಿಲ್ಲ.

1999ರಲ್ಲಿ ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅವರು, ಬಿಜೆಪಿಯ ವಿಜಯಕುಮಾರ್ ಮಳ್ಳೋತ್ರ ವಿರುದ್ಧ ಪರಾಭವಗೊಂಡಿದ್ದರು. ಅಸ್ಸಾಂನಿಂದ ಐದು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು, ಅಲಾವಧಿಗೆ ರಾಜಸ್ಥಾನದಿಂದ ಆಯ್ಕೆಯಾಗಿ ಮೇಲ್ಮನೆ ಪ್ರವೇಶಿಸಿದ್ದರು. 1998ರ ಮಾರ್ಚ್ 21ರಿಂದ 2004ರ ಮೇ 21ರ ವರೆಗೆ ರಾಜ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.
1991ರಲ್ಲಿ ಪಿ.ವಿ.ನರಸಿಂಹರಾವ್ ಸರಕಾರದ ಅಡಿಯಲ್ಲಿ ಹಣಕಾಸು ಸಚಿವರಾಗಿ ಕೆಲಸ ಮಾಡಿದ ಅವರು, ಆರ್ಥಿಕ ಉದಾರೀಕರಣ ನೀತಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಭಾರತದಲ್ಲಿ ವಿದೇಶಿ ಹೂಡಿಕೆ ಮಾಡಲು ಒಪ್ಪಿಗೆ ನೀಡಿದ್ದು ಅವರು ಹಣಕಾಸು ಸಚಿವರಾಗಿದ್ದ ಕಾಲದಲ್ಲಿ, ಕೈಗಾರಿಕೆಗಳ ಅಭಿವೃದ್ಧಿಗೆ ಇದು ಬುನಾದಿಯಾ ಗಿದ್ದು, ಭಾರತದ ಆರ್ಥಿಕ ಬೆಳವಣಿಗೆಗೆ ವೇಗ ನೀಡಿತು.
2004ರಲ್ಲಿ ಯುಪಿಎ ಸರಕಾರ ಬಹುಮತ ಪಡೆದಾಗ ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿ ಆಯ್ಕೆಯಾದಾಗ ಎಲ್ಲರೂ ಅಚ್ಚರಿಗೊಂಡಿದ್ದರು. ಆದರೆ ಮನಮೋಹನ್ ಸಿಂಗ್ ಮುಂದಿನ ಒಂದು ದಶಕ ಪ್ರಧಾನಿಯಾಗಿ ಹಲವು ಸಾಧನೆಗಳನ್ನು ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಮನಮೋಹನ್ ಪ್ರಧಾನಿಯಾಗಿದ್ದಾಗ ಭಾರತ ಸ್ಥಿರವಾದ ಆರ್ಥಿಕ ಬೆಳವಣಿಗೆ ಕಂಡಿತು. ಇಂದು ಭಾರತ ಜಗತ್ತಿನ ಪ್ರಮುಖ ಆರ್ಥಿಕ ಶಕ್ತಿಯಾಗುವತ್ತ ಮುನ್ನಡೆಯುತ್ತಿದ್ದು ಇದಕ್ಕೆ ಬುನಾದಿ ಹಾಕಿದ್ದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆಯಂತಹ ಪ್ರಮುಖ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾಗದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಾಯಿತು.
2008ರಲ್ಲಿ ಭಾರತ-ಯುಎಸ್ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು, ಭಾರತದ ಪರಮಾಣು ಪ್ರತ್ಯೇಕತೆಯನ್ನು ಕೊನೆಗೊಳಿಸಿ ದರು ಮತ್ತು ಸುಧಾರಿತ ಪರಮಾಣು ತಂತ್ರಜ್ಞಾನಕ್ಕೆ ಮುನ್ನುಡಿ ಬರೆದರು.
ಆರೋಗ್ಯ ಮತ್ತು ಶಿಕ್ಷಣವನ್ನು ಸುಧಾರಿಸಲು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಮತ್ತು ಸರ್ವ ಶಿಕ್ಷಾ ಅಭಿಯಾನದಂತಹ ಕಾರ್ಯಕ್ರಮಗಳನ್ನು ಪರಿಚಯಿಸಲಾ ಯಿತು. ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ಹೆಚ್ಚಿನ ಹೂಡಿಕೆಗೆ ಬೆಂಬಲ ನೀಡಿದರು.
ಆರ್‌ಬಿಐ ಗವರ್ನರ್ ಆಗಿ, ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಅವರು, ರಾಜಕೀಯ ಜೀವನದಿಂದ ನಿವೃತ್ತಿಯಾಗಿದ್ದು ವಿಶ್ರಾಂತಿ ಪಡೆಯುತ್ತಿದ್ದರು. ಪ್ರಧಾನಿಯಾಗಿದ್ದಾಗ ಹಲವು ಟೀಕೆಗಳನ್ನು ಕೂಡ ಎದುರಿಸಿದರು. ಅನಾರೋಗ್ಯದ ಕಾರಣದಿಂದಾಗಿ ಈ ಬಾರಿ ಲೋಕಸಭೆ ಚುನಾವಣೆಯ ಪ್ರಚಾರದಿಂದಲೂ ದೂರ ಉಳಿದಿದ್ದರು.
ಡಾ.ಸಿಂಗ್ ಅವರು ಸಾಮಾಜಿಕ ಕ್ಷೇತ್ರದ ತಮ್ಮ ಅದ್ವಿತೀಯ ಸಾಧನೆಗಾಗಿ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ (1987) ಸೇರಿದೆ. ಜತೆಗೆ ವಿಜ್ಞಾನ ಕಾಂಗ್ರೆಸ್‌ನ ಜವಾಹರಲಾಲ್ ನೆಹರೂ ಜನ್ಮ ಶತಮಾನೋತ್ಸವ ಪ್ರಶಸ್ತಿ (1995), ಹಣಕಾಸು ಸಚಿವರಿಗೆ ನೀಡುವ ಏಷ್ಯಾ ಎತ್ತ ಪ್ರಶಸ್ತಿ (1993 ಮತ್ತು 1994) ಹಣಕಾಸು ಸಚಿವರಿಗೆ ನೀಡುವ ಯೂರೋ ಹಣ ಪ್ರಶಸ್ತಿ (1993), ಕೇಂಬ್ರಿಜ್ ವಿಶ್ವವಿದ್ಯಾಲಯದ ಆಡಮ್ ಸ್ಮಿತ್ ಬಹುಮಾನ (1956), ಕೇಂಬ್ರಿಜ್‌ನ ಸೇಂಟ್ ಜಾನ್ ಕಾಲೇಜಿನಲ್ಲಿ ಅತ್ಯತ್ತುಮ ಸಾಧನೆಗಾಗಿ ರೈಟ್ ಪ್ರಶಸ್ತಿ (1955) ಲಭಿಸಿದೆ.
‘ನಾನು ಮಾಧ್ಯಮಗಳಿಗೆ ಹೆದರುವಂತಹ ಪ್ರಧಾನಿ ಅಲ್ಲ’. ಸುಮಾರು ಹನ್ನೊಂದು ವರ್ಷಗಳ ಹಿಂದೆ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರು 100ಕ್ಕೂ ಹೆಚ್ಚು ಪತ್ರಕರ್ತರ ಎದುರು ಕೂತು ಹೇಳಿದ ಮಾತಿದು.
2025ನೇ ಜನವರಿ 3ನೇ ತಾರೀಖು ಬಂದರೆ, ಆ ಮಾಧ್ಯಮಗೋಷ್ಠಿ ನಡೆದು ಸರಿಯಾಗಿ ಹನ್ನೊಂದು ವರ್ಷ ತುಂಬುತ್ತಿತ್ತು. 2014ರ ಜನವರಿ 3ರಂದು ನಡೆದ ಆ ಮಾಧ್ಯಮಗೋಷ್ಠಿಯ ಮಹತ್ವ ಎಷ್ಟಿದೆಯೆಂದರೆ, ದೇಶದ ಪ್ರಧಾನಿಯೊಬ್ಬರು ದೇಶದೊಳಗೆ ನಡೆಸಿದ ಕೊನೆಯ ಮಾಧ್ಯಮಗೋಷ್ಠಿ ಅದು.
ಪೋಲಿಯೊ ನಿರ್ಮೂಲನೆ
ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವಾಗಿ ಮಾಡುವಲ್ಲಿ 2004 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಶ್ರಮಿಸಿದ ಅವರು, ಕೊನೆಗೆ ಭಾರತವು ತನ್ನ ಕೊನೆಯ ಪೋಲಿಯೊ ಪ್ರಕರಣವನ್ನು 13 ಜನವರಿ 2011 ರಂದು ದಾಖಲಿಸಿತ್ತು. ಇದರೊಂದಿಗೆ ಇವರ ಆಡಳಿತಾವಧಿಯಲ್ಲಿ ಭಾರತ ಫೆಬ್ರವರಿ 24, 2012 ರಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣ ಪಡೆಯಿತ್ತು.
ಸಿಂಗ್ ಸರಕಾರದ 5 ಮಹತ್ವದ ಹೆಜ್ಜೆಗಳು
- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ).
- ದೇಶದಲ್ಲಿ ಪಾರದರ್ಶಕತೆ ತರಲು ಮಾಹಿತಿ ಹಕ್ಕು ಕಾಯಿದೆ.
- ಪ್ರತಿ ಮಗುವಿಗೂ ಶಿಕ್ಷಣದ ಹಕ್ಕು ನೀಡಲು ಕಡ್ಡಾಯ ಶಿಕ್ಷಣದ ಯೋಜನೆ.
- ಭ್ರಷ್ಟಾಚಾರ ತಡೆಗೆ ನೇರ ನಗದು ವರ್ಗಾವಣೆ(ಡಿಬಿಟಿ).
- ಆಧಾರ್ ಜಾರಿ.