ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಮಾರ್ಚ್ ಮಾಹೆಯ ಅಂತ್ಯದೊಳಗೆ ಪೂರ್ಣಗೊಳಿಸುವ ಮೂಲಕ ಶೇಕಡಾ ನೂರರಷ್ಟು ಪ್ರಗತಿ ಸಾಧಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಪ್ರಸಾದ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಜನವರಿ 2021ರ ಮಾಹೆಯ ಅಂತ್ಯದವರೆಗಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೋವಿಡ್-19 ಲಸಿಕೆಯನ್ನು ಸ್ವೀಕರಿಸಲು ನೋಂದಾಯಿಸಿಕೊಂಡಿರುವ ಕರೊನಾ ವಾರಿಯರ್ಸ್ ಎಲ್ಲರೂ ಲಸಿಕೆಯನ್ನು ಸ್ವೀಕರಿಸಬೇಕು ಎಂದರಲ್ಲದೆ, ಜಿಲ್ಲೆಯಲ್ಲಿ ಈಗಾಗಲೇ 9468 ಮಂದಿ ನೋಂದಣಿ ಮಾಡಿಸಿದ್ದು, 5798 ಮಂದಿ ಮಾತ್ರ ಲಸಿಕೆ ಸ್ವೀಕರಿಸುವ ಮೂಲಕ ಶೇ.61.24 ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ. ಲಸಿಕೆ ಪಡೆಯದ ನೋಂದಾಯಿತ ಕರೊನಾ ವಾರಿಯರ್ಸ್ಗಳು ಲಸಿಕೆ ಸ್ವೀಕರಿಸಬೇಕು ಎಂದು ತಿಳಿಸಿದರು.
ದೇವನಹಳ್ಳಿ ತಾಲ್ಲೂಕಿನ ಮಲ್ಲೇನಹಳ್ಳಿಯ ರೇಷ್ಮೆ ಕೃಷಿ ಕ್ಷೇತ್ರದಲ್ಲಿನ ನೌಕರರ ವಸತಿ ಗೃಹದ ಆವರಣದಲ್ಲಿ ಅನಧಿಕೃತವಾಗಿ ಅನ್ಯ ವ್ಯಕ್ತಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಂಡಿದ್ದು, ಅದನ್ನು ಶೀಘ್ರವೇ ತೆರವುಗೊಳಿಸಲು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಸರ್ಕಾರಿ ಶಾಲಾ ಹಾಗೂ ಕಾಲೇಜು ವ್ಯಾಪ್ತಿಗೆ ಒಳಪಡುವ ಖಾತೆಯಾಗದ ಭೂಮಿಯನ್ನು ಇಲಾಖೆಯ ಹೆಸರಿಗೆ ನೋಂದಣಿ ಪ್ರಕ್ರಿಯೆ ಮಾಡಲು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಹಸೀಲ್ದಾರ್ಗಳನ್ನು ಸಂಪರ್ಕಿಸಿ, ಶೀಘ್ರವಾಗಿ ಇ-ಖಾತೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಹಾಜರಾತಿ ಶೇ.90 ರಷ್ಟಿದ್ದು, ಗೈರಾಗಿರುವ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ಮಾಡಬೇಕೆಂದರಲ್ಲದೆ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರುವುದರಿಂದ ಫಲಿತಾಂಶ ಹೆಚ್ಚಳವಾಗತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಹೇಳಿದರು.
ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿ ಯೋಜನೆಯಡಿ ಶೇ. 84.68 ರಷ್ಟು ಪ್ರಗತಿ ಸಾಧಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಿಚನ್ ಗಾರ್ಡನ್ ಅಭಿಯಾನ ಪ್ರಾರಂಭಿಸಲಾಗಿದ್ದು, ಕನಿಷ್ಠ 50 ಜನರಿಗೆ ಈ ಬಗ್ಗೆ ಪ್ರಚಾರ ಮೂಡಿಸುವ ಮೂಲಕ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ನಿರ್ದೇಶನ ನೀಡಿದರು ಹಾಗೂ ಜಿಲ್ಲೆಯಲ್ಲಿ ಕಾಂಪೌಂಡ್ ಇರುವ ಅಂಗನವಾಡಿಗಳನ್ನು ಗುರುತಿಸಿ, ಕಿಚನ್ ಗಾರ್ಡನ್ ನಿರ್ಮಿಸುವ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನಲ್ಲಿ ಮಾತ್ರ 50 ಅಂಗನವಾಡಿಗಳ ಪೈಕಿ 750 ಗಿಡಗಳನ್ನು ನೀಡಲಾಗಿದ್ದು, ಉಳಿದ ಮೂರು ತಾಲ್ಲೂಕುಗಳಲ್ಲಿಯೂ ಸಹ ಕಿಚನ್ ಗಾರ್ಡನ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಶಾಲೆಗೆ ತೆರಳಲು ಸರಿಯಾದ ಸೌಲಭ್ಯ ಇಲ್ಲದಿರುವ ಕಾರಣ ವಸತಿ ನಿಲಯಗಳಿಗೆ ಪ್ರವೇಶ ನೀಡಬೇಕು ಹಾಗೂ ವಸತಿ ನಿಲಯಗಳ ಆವರಣದಲ್ಲಿ ನಿರ್ಮಿಸಲಾಗಿರುವ ಕೃಷಿ ಹೊಂಡಗಳಿಗೆ ತಂತಿ ಬೇಲಿ ನಿರ್ಮಾಣ ಮಾಡಲು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆಯಡಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 93 ಫಲಾನುಭವಿಗಳ ಪೈಕಿ 34 ಫಲಾನುಭವಿಗಳ ಆಧಾರ್ ನೋಂದಣಿ ಪೂರ್ಣಗೊಂಡಿದ್ದು, 30 ಫಲಾನುಭವಿಗಳ ಆಧಾರ್ ನೋಂದಣಿ ಬಾಕಿಯಿದ್ದು 25 ಫಲಾನುಭವಿಗಳನ್ನು ಬ್ಲಾಕ್ ಮಾಡಿರುವ ಬಗ್ಗೆ ಕಾರಣ ನೀಡುವಂತೆ ಅಧಿಕಾರಿಗಳಿಗೆ ಕೇಳಿದಾಗ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ 25 ಫಲಾನುಭವಿಗಳನ್ನು ಬ್ಲಾಕ್ ಮಾಡಿರುವ ಬಗ್ಗೆ ಉತ್ತರಿಸಿದ ಅಧಿಕಾರಿಗಳು ಫಲಾನುಭವಿಗಳ ಆಧಾರ್ ಕಾರ್ಡ್ ನಲ್ಲಿನ ಮಾಹಿತಿ ಸರಿಹೊಂದುತ್ತಿಲ್ಲ ಹಾಗೂ ನಿರ್ದಿಷ್ಟ ಸಮಯ ನೀಡಿದರು ವಸತಿ ನಿಲಯ ನಿರ್ಮಿಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಬ್ಲಾಕ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಅವರು ಮಾತನಾಡಿ ಜಿಲ್ಲಾ ವ್ಯಾಪ್ತಿಯಲ್ಲಿನ ವಸತಿ ನಿಲಯ, ಅಂಗನವಾಡಿ, ಶಾಲೆಗಳಲ್ಲಿ ಕಡ್ಡಾಯವಾಗಿ ಮಳೆನೀರು ಕೊಯ್ಲು ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಫೆಬ್ರವರಿ ತಿಂಗಳ ಅಂತ್ಯದೊಳಗೆ ವಸತಿ ನಿಲಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಯಾಗಲಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಹಿಳಾ ಕಾಯಕೋತ್ಸವದಡಿಯಲ್ಲಿ ಪ್ರತಿ ಪಂಚಾಯಿತಿಯಲ್ಲಿ ನರೇಗಾ ಯೋಜನೆಯ ಮೂಲಕ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಮೀನುಗಳಲ್ಲಿ ಬದು ನಿರ್ಮಾಣ, ಕಿಚನ್ ಗಾರ್ಡನ್, ಕೃಷಿ ಹೊಂಡ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ ಎಂದರು.
ಮಣ್ಣು ಮಿಶ್ರಿತ ರಸಗೊಬ್ಬರ ಹಾಗೂ ಸಮಯ ಮುಗಿದ ಔಷಧಿ ವಿತರಣೆ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ಕೃಷಿ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು ಎಂದರಲ್ಲದೆ, ಕಲಬೆರಕೆ ರಸಗೊಬ್ಬರ ವಿತರಣೆ ಪುನರಾವರ್ತನೆಯಾದರೆ ಪರವಾನಿಗೆ ರದ್ದು ಮಾಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಶೇ.99 ರಷ್ಟು ಬೆಳೆಯಾಗಿದ್ದು 4 ತಾಲ್ಲೂಕಿನಲ್ಲಿ 16.867 ಜನರು ಮಾರುಕಟ್ಟೆಯಲ್ಲಿ ರಾಗಿ ಮಾರಾಟ ಮಾಡಲು ನೋಂದಣಿ ಮಾಡಿಸಿದ್ದಾರೆ. ಒಂದು ಕ್ವಿಂಟಾಲ್ ಗೆ ರೂ.3295 ಗಳನ್ನು ನಿಗದಿಪಡಿಸಲಾಗಿದ್ದು, ಒಬ್ಬ ವ್ಯಕ್ತಿ ಗರಿಷ್ಠ 50 ಕ್ವಿಂಟಾಲ್ ಮಾರಾಟ ಮಾಡಬಹುದು ಹಾಗೂ ಕೃಷಿ ಇಲಾಖೆಯಿಂದ ಹೊಸಕೋಟೆ ತಾಲ್ಲೂಕಿನಲ್ಲಿ 4 ಲಾರಿಗಳನ್ನು ರೈಡ್ ಮಾಡಲಾಗಿದ್ದು, 80 ಟನ್ ರಸಗೊಬ್ಬರ ವಶಪಡಿಸಿಕೊಳ್ಳಲಾಗಿದೆ ಎಂದು ಕೃಷಿ ಅಧಿಕಾರಿಯು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ರೂಪ ಮರಿಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಂಜುನಾಥ್, ಉಪ ಕಾರ್ಯದರ್ಶಿ ಕೆ.ಕರಿಯಪ್ಪ, ಮುಖ್ಯ ಯೋಜನಾಧಿಕಾರಿ ಬಿ.ವಿನುತಾರಾಣಿ, ಮುಖ್ಯ ಲೆಕ್ಕಾಧಿಕಾರಿ ಟಿ.ರಮೇಶರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.