ಹಾವೇರಿ: ಡಿಶ್ ತಾಂತ್ರಿಕ ತೊಂದರೆಗೆ ಸರಿಯಾಗಿ ಸ್ಪಂದಿಸದ ಕಾರಣ ಗ್ರಾಹಕನಿಗೆ ರೂ.10,600 ಪರಿಹಾರ ಧನ ಪಾವತಿಸುವಂತೆ ಡಿಶ್ ಮಾರಾಟಗಾರ ಬ್ಯಾಡಗಿ ಪಟ್ಟಣದ ಚಂದ್ರೇಶ್ವರಿ ಎಂಟರ್‍ಪ್ರೈಸ್ ಮಾಲೀಕ ಗಂಗಾಧರ ಹೊನಕೇರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ಹೊರಡಿಸಿದೆ.
ಬ್ಯಾಡಗಿ ಪಟ್ಟಣದ ಪ್ರಕಾಶ ಎಸ್.ಎಚ್. ಅವರು ಫೆ.7.2019 ರಂದು ಚಂದ್ರೇಶ್ವರಿ ಎಂಟರ್‍ಪ್ರೈಸ್ ಡಿಟಿಎಚ್ ಡಿಶ್ ಮಾರಾಟ ಅಂಗಡಿಯಿಂದ ಡಿಶ್ ಖರೀದಿಸಿದ್ದರು. ಖರೀದಿಯ ಸಂದರ್ಭದಲ್ಲಿ ಒಂದು ವರ್ಷದವರೆಗೆ ವಾರಂಟಿ ನೀಡಲಾಗಿತ್ತು. ಖರೀದಿಯ ಸಂದರ್ಭದಲ್ಲಿ ಜಿ.ಎಸ್.ಟಿ. ಬಿಲ್ಲ ನೀಡದೇ ಕೈ ಬರಹದಲ್ಲಿ ಬಿಲ್ ನೀಡಿದ್ದರು. ಡಿಶ್ ಖರೀದಿಸಿದ ಕೇವಲ ಎಂಟೇ ದಿನಗಳಲ್ಲಿ ತಾಂತ್ರಿಕ ತೊಂದರೆ ಎದುರಾದ ಕಾರಣ ಅಂಗಡಿ ಮಾಲೀಕನಿಗೆ ಗಮನಕ್ಕೆ ತಂದಾಗಲೂ ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿದ ಕಾರಣ ಬೇಸತ್ತ ಖರೀದಿದಾರರು ವಕೀಲರ ಮೂಲಕ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಶ್ರೀಮತಿ ಸುನಂದಾ ಹಾಗೂ ಮಹಿಳಾ ಸದಸ್ಯರಾದ ಶ್ರೀಮತಿ ಮಹೇಶ್ವರಿ ಬಿ.ಎಸ್. ಅವರು ಪ್ರಕರಣ ಕೂಲಕುಂಷವಾಗಿ ಪರಿಶೀಲನೆ ನಡೆಸಿ ಅಂಗಡಿ ಮಾಲೀಕನು ಗ್ರಾಹಕನಿಗೆ ಮೋಸಮಾಡಿರುವುದು ರುಜುವಾತಾದಕಾರಣ ಹಾಗೂ ಜಿ.ಎಸ್.ಟಿ. ಬಿಲ್ ನೀಡದೇ ಅನುಚಿತ ವ್ಯಾಪಾರಪದ್ಧತಿಯಲ್ಲಿ ತೆರಿಗೆ ವಂಚಿಸಿರುವುದನ್ನು ಕಂಡುಬಂದ ಕಾರಣ ಡಿಶ್ ಖರೀದಿಸಿದ ಗ್ರಾಹಕನಿಗೆ ಪರಿಹಾರವಾಗಿ ರೂ.5000/-, ಡಿಶ್ ಖರೀದಿಸಿದ ಮೊತ್ತ ರೂ.3,600ನ್ನು ಶೇ.6ರ ಬಡ್ಡಿಯೊಂದಿಗೆ ಹಾಗೂ ದಾವೆ ಖರ್ಚು ರೂ.200/-ನ್ನು 30 ದಿನದೊಳಗಾಗಿ ನೀಡಲು ಅಂಗಡಿ ಮಾಲೀಕನಿಗೆ ಆದೇಶ ನೀಡಿದ್ದಾರೆ. ತಪ್ಪಿದಲ್ಲಿ ಪರಿಹರದ ಮೊತ್ತಕ್ಕೆ ವಾರ್ಷಿಕ ಶೇ.12ರ ಬಡ್ಡಿ ಸಮೇತ ಕೊಡಬೇಕೆಂದು ಆದೇಶಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರಿ ಸಹಾಯಕ ರಿಜಿಸ್ಟಾರ್ ಹಾಗೂ ಸಹಾಯಕ ಆಡಳಿತಧಿಕಾರಿ ಕರಿಯಪ್ಪ ಬಡಪ್ಪಳವರ ಅವರು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.