ದೊಡ್ಡಬಳ್ಳಾಪುರ: ಇತ್ತೀಚೆಗೆ ನಡೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಸದಸ್ಯರಿಗೆ ನಗರ ತಾಲೂಕು ಪಂಚಾಯಿತಿ ಹಿಂಬಾಗದಲ್ಲಿನ ಸಾಮರ್ಥ್ಯ ಸೌಧದಲ್ಲಿ ಸಾಮರ್ಥ್ಯ ಅಭಿವೃದ್ಧಿ ತರಬೇತಿಯನ್ನು ಆರಂಭಿಸಲಾಯಿತು.
ತರಬೇತಿ ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಕಾರ್ಯದರ್ಶಿ ಕೆ.ಕರಿಯಪ್ಪ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬ ಗ್ರಾಮಪಂಚಾಯಿತಿ ಸದಸ್ಯರೂ ಕೂಡ ಗೈರಾಗದೆ ತರಬೇತಿಯ ಅನುಕೂಲತೆಗಳನ್ನು ಪಡೆದು ಕೊಳ್ಳಬೇಕು, ಸದಸ್ಯರಿಗೆ ಬೇಕಾದ ಊಟ ,ಉಪಹಾರದ ವ್ಯವಸ್ಥೆ ಯನ್ನು ಕಲ್ಪಿಸಲಾಗಿದೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಾತಿ ಕಡೆ ಹೆಚ್ಚು ಗಮನಹರಿಸಬೇಕು, ಗೈರಾದ ಸದಸ್ಯರ ಪಟ್ಟಿಯನ್ನು ಮೇಲಿನ ಅಧಿಕಾರಿಗಳಿಗೆ ನೀಡಬೇಕಿದೆ. ತರಬೇತಿಗೆ ಗೈರಾಗುವ ಸದಸ್ಯರ ವಿರುದ್ದ ಶಿಸ್ತು ಕ್ರಮಕೈಗೊಳ್ಳಲಾಗುವುದೆಂದರು.
ಚುನಾಯಿತ ಸದಸ್ಯರು ಗ್ರಾಮಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸಬೇಕು, ಯಾವುದೇ ಕುಂದು ಕೊರತೆ ಬಂದರೆ ತಾಲೂಕು ಪಂಚಾಯಿತಿ ಇಒ ಅವರ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಮುರುಡಯ್ಯ ಮಾತನಾಡಿ, ಗ್ರಾಮ ಪಂಚಾಯತಿಗಳಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡುವ ಸಲುವಾಗಿ ಈ ತರಬೇತಿ ಆಯೋಜಿಸಲಾಗಿದೆ.
ಎರಡು ಗ್ರಾಮಪಂಚಾಯಿತಿಗಳ ಸದಸ್ಯರನ್ನು ಸೇರಿಸಿ 5ದಿನಗಳ ಕಾಲ ತರಬೇತಿ ನೀಡಲಾಗುತ್ತಿದ್ದು, 25 ಗ್ರಾಮಪಂಚಾಯಿತಿಗಳ ಸದಸ್ಯರಿಗೆ ತರಬೇತಿ ನೀಡಲಾಗುವುದು.
ಈ ತರಬೇತಿಯಲ್ಲಿ ಗ್ರಾಪಂಗಳ ಅಭಿವೃದ್ಧಿ ಹೇಗೆ ಎಂಬ ಕುರಿತಾದ ಮಾಹಿತಿ, ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯಿತಿಯಿಂದ ಸಿಗುವ ಸವಲತ್ತುಗಳ ಬಗ್ಗೆ ಸಂಕ್ಷಿಪ್ತವಾಗಿ ಎಲ್ಲಾ ಸದಸ್ಯರು ತಿಳಿದುಕೊಂಡು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ತಾಪಂ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಗ್ರಾಮಪಂಚಾಯಿತಿಯ ಅಭಿವೃದ್ಧಿ ಕನಸು ಹೊತ್ತು ಚುನಾವಣೆಯಲ್ಲಿ ಜಯಗಳಿಸಿದ ಎಲ್ಲ ಸದಸ್ಯರು ಈ ತರಬೇತಿಯ ಅನುಕೂಲಗಳನ್ನು ಪಡೆದು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ಮಾಡಬೇಕಿದೆ. ಯಾವುದೇ ಪಕ್ಷಪಾತವಿಲ್ಲದೆ ಶಿಸ್ತಿನಿಂದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಬೇಕಿದೆ. ಪ್ರತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಪ್ರಶ್ನಿಸಿ ಅಭಿವೃದ್ಧಿ ಪಥದಲ್ಲಿ ನಡೆಯಿರಿ ಎಂದು ಸದಸ್ಯರಿಗೆ ಸಲಹೆ ನೀಡಿದರು.
ಈ ವೇಳೆ ಪಿಡಿಒಗಳಾದ ಮುನಿಯಾ ನಾಯ್ಕ್, ರಮಿತ, ತರಬೇತುದಾರ ಬೈಲಾಜನಮೂರ್ತಿ, ಸಹಾಯಕ ನಿರ್ದೇಶಕ ಗಂಗರಾಜು, ವ್ಯವಸ್ಥಾಪಕ ಗಂಗಾರಂಗಯ್ಯ, ಕೃಷ್ಣಮೂರ್ತಿ, ವೆಂಕಟೇಶ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…