ದೊಡ್ಡಬಳ್ಳಾಪುರ: ತಾಲೂಕಿನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಹುಲುಕುಡಿ ಬೆಟ್ಟದಲ್ಲಿ ವೀರಭದ್ರಸ್ವಾಮಿ ಮತ್ತು ಭದ್ರಕಾಳಮ್ಮ ದೇವರ 40ನೇ ವರ್ಷದ ಜಾತ್ರಾ ಮಹೋತ್ಸವ ಫೆಬ್ರವರಿ 18 ಮತ್ತು 19ರಂದು ವಿಜೃಂಭಣೆಯಿಂದ ನಡೆಯಲಿದೆ. ಪ್ರತಿ ವರ್ಷ ರಥಸಪ್ತಮಿಯ ದಿನದಂದು ದೀಪೋತ್ಸವ ಹಾಗೂ ಧನಗಳ ಜಾತ್ರೆ ನಡೆಯುತ್ತದೆ. ಕಾರ್ಯಕ್ರಮಗಳು: ಫೆ.18ರಂದು ಬೆಳಗ್ಗೆ 10ಕ್ಕೆ ಅಗ್ನಿಕುಂಡಕ್ಕೆ ಪೂಜೆ ಹಾಗೂ ಅಗ್ನಿ ಸ್ಪರ್ಷ, ಸಂಜೆ 5ಕ್ಕೆ ಗಂಗಾಪೂಜೆ, ಕಳಶಪೂಜೆ, ಗೋ ಪೂಜೆ, ನಾಂದಿ ಪೂಜೆ, ಅಂಕುರಾರ್ಪಣ, ತೋಗ ಕಳಸಗಳ ಪ್ರತಿಷ್ಟಾಪನೆ. ಸಂಜೆ 6ಕ್ಕೆ ಶ್ರೀ ವೀರಭದ್ರ ಸ್ವಾಮಿ, ಪ್ರಸನ್ನ ಭದ್ರಕಾಳಮ್ಮನವರಿಗೆ ಉಯ್ಯಾಲೆ ಮಂಟಪದಲ್ಲಿ ಉಯ್ಯಾಲೋತ್ಸವ, ರಾತ್ರಿ 7ಕ್ಕೆ ವೀರಗಾಸೆ ಕುಣಿತ ಅಗ್ನಿಕುಂಡ ಹಾಯುವುದು, ಅಕ್ಕಿಪೂಜೆ, ದೀಪಾರಾಧನೆ, ಭಜನಾ ಕಾರ್ಯಕ್ರಮ ನಡೆಯಲಿದೆ.
ಫೆಬ್ರವರಿ 19ರಂದು ಬೆಳಗ್ಗೆ ಬ್ರಾಹ್ಮಿ ಮಹೊರ್ತದಲ್ಲಿ ಮೂಲದೇವರಿಗೆ ರುದ್ರಾಭಿಷೇಕದ ಮೂಲಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಬೆಳ್ಳಿಗ್ಗೆ 10.30ಕ್ಕೆ ರಥಾಂಗ ಹೋಮ, 11.30ಕ್ಕೆ ಬಾಲ್ಯ ವಿವಾಹ ತಡೆ ಕಾನೂನು ಅರಿವು ಕಾರ್ಯಕ್ರಮ, ಮದ್ಯಾಹ್ನ 12-5 ಮಹಾರಥೋತ್ಸವ ನಡೆಯಲಿದೆ. ಕಾರ್ಯಕ್ರಮದ ಸಾನಿದ್ಯವನ್ನು ಚಿಕ್ಕಬಳ್ಳಾಪುರದ ಅದಿಚುಂಚನಗಿರಿ ಶಾಖಾ ಮಠ ಶ್ರೀ ಮಂಗಳಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಜಾತ್ರೆಯ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಿಂದ ಹುಲುಕುಡಿ ಬೆಟ್ಟಕ್ಕೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಎಂದು ಶ್ರೀ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ದಿ ಟಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ಷೇತ್ರದ ಐತಿಹಾಸಿಕ ಹಿನ್ನೆಲೆ: ಕ್ರಿ.ಶ.1015ರಲ್ಲಿ ರಾಜ ವಿಷ್ಣುವರ್ದನ,ಪೆನ್ನಂಬಟ್ಟನ ಮಗ ಪೊನ್ನಂ ಎಂಬುವನಿಗೆ ಹುಲುಕುಡಿ ಬೆಟ್ಟದ ದೇವಾಲಯದಲ್ಲಿ ಪೂಜಾ ಕೈಕಂಕರ್ಯಗಳನ್ನು ಮಾಡಲು ಅನುಮತಿ ನೀಡಿದ ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಇದು ನಾಡಪ್ರಭು ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿತ್ತು. ಈ ಬೆಟ್ಟ ಋಷಿಮುನಿಗಳ ತಪೋ ಜಾಗವಾಗಿದ್ದು, ಅಗಸ್ತ್ಯ ಮಹಾ ಮುನಿಗಳು ಭೂಸ್ಪರ್ಶಮಾಡಿದ ಜಾಗದಲ್ಲಿ ಶಿವಲಿಂಗವಿದೆ. ಹುಲುಕುಡಿ ಮಣ್ಣೆ ಪ್ರಾಂತ್ಯಕ್ಕೆ ಸೇರುತ್ತದೆ ಎಂದು ಶಾಸನಗಳು ಹೇಳುತ್ತದೆ. ಉತ್ತರಕ್ಕೆ ಮುರುಗಲ್ಲು ನಾಡು, ದಕ್ಷಿಣಕ್ಕೆ ಯಲಹಂಕ ನಾಡು, ಪೂರ್ವಕ್ಕೆ ಆವತಿ ನಾಡು, ಪಶ್ಚಿಮಕ್ಕೆ ಮಣ್ಣೆ ನಾದು ಎಂದು ಇತಿಹಾಸ ತಜ್ನರು ಹೇಳುತ್ತಾರೆ.
ವಿಶೇಷತೆ: ಹುಲುಕುಡಿ ಬೆಟ್ಟ ಸಮುದ್ರ ಮಟ್ಟದಿಂದ 3500 ಅಡಿ ಎತ್ತರದಲ್ಲಿರುವ ಕಡಿದಾದ ಬೆಟ್ಟ,ಇಲ್ಲಿರುವ ವಿರಭದ್ರಸ್ವಾಮಿಯ ಗುಹಾಂತರ ದೇವಾಲಯ ಇರುವುದು ದಕ್ಷಿಣ ಭಾರತದಲ್ಲಿ ವಿರಳ, ಬೆಟ್ಟದ ಸುತ್ತಲೂ ಹಲವು ಶಿವ ಮತ್ತು ವಿಷ್ಣು ದೇವಾಲಯಗಳನ್ನು ನೊಡಬಹುದಾಗಿದೆ. ಬೆಟ್ಟದ ತಪ್ಪಲಿನಲ್ಲಿರುವ ಮಾಡೇಶ್ವರ ಗ್ರಾಮದಲ್ಲಿ ಬೃಹದಾಕಾರದ ಅದ್ಭುತವಾದ ಶಿವಲಿಂಗವಿದೆ.ಸಾಮಾನ್ಯವಾಗಿ ದೇವಾಲಯದ ದ್ವಾರಬಾಗಿಲಲ್ಲಿ ಜಯವಿಜಯ ಇರುವುದು ವಾಡಿಕೆ ಆದರೆ ಇಲ್ಲಿ ಮಕ್ಕಳನ್ನು ಎತ್ತಿಕೊಂಡಿರುವ ತಾಯಂದಿರು ಇದ್ದಾರೆ. ಆದ್ದರಿಂದ ಇಲ್ಲಿನ ದೇವರನ್ನು ಮಕ್ಕಳ ವೀರಭದ್ರ ಎಂದು ಕರೆಯುತ್ತಾರೆ.
ಇಷ್ಟಾರ್ಥ ಸಿದ್ದಿ: ಬೆಟ್ಟದ ಮೇಲಿರುವ ಕಲ್ಯಾಣಿಯಲ್ಲಿ ವರ್ಷಪೂರ್ತಿ ನೀರಿದ್ದು,ಭಕ್ತರು ಸ್ನಾನಮಾಡಿ ದೇವರಿಗೆ ನೈವೇದ್ಯ ಅರ್ಪಿಸಿದ ಬಳಿಕ ಪ್ರಸಾದವನ್ನು ಸ್ವೀಕರಿಸಿದರೆ ಸಂತಾನ ಭಾಗ್ಯ ಮತ್ತು ಇಷ್ಟಾರ್ಥಗಳು ಈಡೇರುವುದು ಎಂಬುದು ಭಕ್ತರ ನಂಬಿಕೆ, ಕ್ಷೇತ್ರದಲ್ಲಿ ಭಾನುವಾರ, ಸೋಮವಾರ ಮತ್ತು ಶುಕ್ರವಾರ ಭಕ್ತರ ಸಮೂಹ ಹೆಚ್ಚಾಗಿರುತ್ತದೆ. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳು ಬಹಳ ನಿಷ್ಟೆಯಿಂದಿರಬೇಕು ಇಲ್ಲವಾದಲ್ಲಿ ಹೆಜ್ಜೇನುಗಳ ದಾಳಿ ಖಂಡಿತ ಎಂಬುದು ಪ್ರತೀತಿ. ಒಟ್ಟಾರೆ ಹುಲುಕುಡಿ ಬೆಟ್ಟ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…