ದೊಡ್ಡಬಳ್ಳಾಪುರ: ಕರೊನಾ ಸಂದರ್ಭದಲ್ಲಿ ಹಣ ನೀಡಿ ಆಕ್ಸಿಜನ್ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹೆಚ್ಚಿನ ಅರಣ್ಯ ನಿರ್ಮಾಣವಾದರೆ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಆಕ್ಸಿಜನ್ ಸಿಗಲು ಸಾಧ್ಯ. ಇಲ್ಲವಾದಲ್ಲಿ ಪರಿಸ್ಥಿತಿ ಸಾಕಷ್ಟು ಹದಗೆಡಲಿದೆ ಎಂದು ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶ್ವೇತಾ ನಾಯ್ಕ್ ತಿಳಿಸಿದರು.
ತಾಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ವತಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ, ಸ್ವಚ್ಚತಾ ಪಾಕ್ಷಿಕಾಚರಣೆ ಅಂಗವಾಗಿ ಸಸಿ ನೆಟ್ಟು ಅವರು ಮಾತನಾಡಿದರು.
ಉತ್ತಮ ಪರಿಸರ ಕಾಪಾಡಲು ಗಿಡ ನೆಡುವುದರ ಜೊತೆಗೆ, ಪರಿಸರ ಸಂರಕ್ಷ ಣೆ ಮಾಡುವುದು ಅತೀ ಮುಖ್ಯ. ಆ ನಿಟ್ಟಿನಲ್ಲಿ ಯಾರೂ ಸಹ ಪ್ಲಾಸ್ಟಿಕ್ ಬಳಸಬಾರದು. ಭವಿಷ್ಯದ ದೃಷ್ಟಿಯಿಂದ ಪ್ಲಾಸ್ಟಿಕ್‌ನ್ನು ಬಳಸಬಾರದು. ತ್ಯಾಜ್ಯವನ್ನು ಆದಷ್ಟು ಕಡಿಮೆ ಮಾಡುವತ್ತ ಗಮನಹರಿಸಬೇಕು. ಪ್ರತೀ ದಿನವು ಪರಿಸರ ಬಗ್ಗೆ ಜಾಗೃತಿ ಇರಬೇಕು. ಆ ಮೂಲಕ ಉತ್ತಮ ಆರೋಗ್ಯ ಹೊಂದಬಹುದೆಂದರು.
ಪಿಡಿಒ ನಾಗರಾಜ್ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಪರಿಸರ ಪ್ರಜ್ಞೆ ಮತ್ತು ಕಾಳಜಿ ಇರಬೇಕು. ಪರಿಸರ ಸಂರಕ್ಷ ಣೆ ಕುಟುಂಬದಿಂದಲೇ ಆರಂಭವಾಗಬೇಕು. ಮನೆಯ ಮುಂದಿನ ಚರಂಡಿ ಸ್ವಚ್ಚತೆಗೂ ಗ್ರಾಮಪಂಚಾಯಿತಿ ಸಿಬ್ಬಂದಿ ಕರ್ತವ್ಯ ಎನ್ನುವ ಬೇಜವಬ್ದಾರಿಯಿಂದ ಹೊರಬಂದು ನಮ್ಮ ಗ್ರಾಮ ನಮ್ಮ ಸ್ಬಚ್ಚತೆ ಸಂಕಲ್ಪ ಎಲ್ಲರದ್ದಾಗಬೇಕು ಎಂದರು.
ಈ ವೇಳೆ ಗ್ರಾಮಪಂಚಾಯಿತಿ ಅಧ್ಯಕ್ಷ ವೆಂಕಟೇಶಪ್ಪ, ಲ್ಯಾಬ್ ಟೆಕ್ನೀಷಿಯನ್ ನರಸಿಂಹಮೂರ್ತಿ ಹಾಗೂ ಸಿಬ್ಬಂದಿ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….