ದೊಡ್ಡಬಳ್ಳಾಪುರ: ಕರೊನಾ ತುರ್ತು ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಸಲುವಾಗಿ ನಗರದ ತಾಯಿ,ಮಗು ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿ ನಿರ್ಮಿಸಲಾಗಿರುವ 70 ಹಾಸಿಗೆಯ ಸುಸಜ್ಜಿತ ಮೇಕ್ ಶಿಫ್ಟ್ ಆಸ್ಪತ್ರೆ ನಾಳೆ(ಜು.7) ಬೆಳಿಗ್ಗೆ 11 ಗಂಟೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಲು ನಗರಕ್ಕೆ ಆಗಮಿಸುತ್ತಿದ್ದು, ಸಿಎಂ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬಹಳಷ್ಟು ತಯಾರಿ ನಡೆಸಿದೆ.
ಬೆಂಗಳೂರಿನಿಂದ ರಸ್ತೆ ಮೂಲಕ ಮುಖ್ಯಮಂತ್ರಿಗಳು ಆಗಮಿಸುವ ಹಿನ್ನೆಲೆಯಲ್ಲಿ, ರಸ್ತೆಯಲ್ಲಿ ದೂಳು ಏಳದಂತೆ ಹಾಗೂ ಕಸ ಕಾಣದಂತೆ ಸ್ವಚ್ಚತಾ ಕಾರ್ಯ ನಡೆಸಲಾಗುತ್ತಿದೆ.
ದುರಸ್ತಿ ಕಾಣುತ್ತಿದೆ ಟಿಬಿ ವೃತ್ತ: ನಗರದ ಟಿವಿ ವೃತ್ತದ ಮಧ್ಯದಲ್ಲಿ ಬಹು ವರ್ಷಗಳಿಂದ ಕಂಬಿಗಳು ಕಿತ್ತುಬಂದು ಪಾಳು ಬಿದ್ದಂತಿದ್ದ ಕಟ್ಟೆಯನ್ನು, ಸಿಎಂ ಆಗಮನದ ಕಾರಣ ತರಾತುರಿಯಲ್ಲಿ ದುರಸ್ತಿ ಮಾಡಲಾಗುತ್ತಿದೆ.
ರಾರಾಜಿಸಿದ ಪ್ಲೆಕ್ಸ್: ಸಿಎಂ ಆಗಮನದ ಹಿನ್ನೆಲೆಯಲ್ಲಿ ಡಿಕ್ರಾಸ್ ವೃತ್ತದಿಂದ ದಾರಿಯುದ್ದಕ್ಕೂ ಬಿಜೆಪಿ ಮುಖಂಡರ ಭಾವಚಿತ್ರ ಉಳ್ಳ ಸ್ವಾಗತ ಕೋರುವ ಪ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ.
ಕಾಂಗ್ರೆಸ್ ನಿಂದ ಪ್ಲೆಕ್ಸ್: ದೊಡ್ಡಬಳ್ಳಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಸಹ ಸಿಎಂ ಯಡಿಯೂರಪ್ಪ, ಶಾಸಕ ಟಿ.ವೆಂಕಟರಮಣಯ್ಯ, ಉಸ್ತುವಾರಿ ಸಚಿವ ಎಂಟಿಬಿ ನಾಗರಾಜು, ಆರೋಗ್ಯ ಸಚಿವ ಡಾ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್ ಅವರುಗಳ ಭಾವಚಿತ್ರ ಇರುವ ಸ್ವಾಗತ ಕೋರುವ ಪ್ಲೆಕ್ಸ್ ಅನ್ನು ರಸ್ತೆಯ ಕೆಲವೆಡೆ ಅಳವಡಿಸಿದೆ.
ಭದ್ರತೆ: ಸಿಎಂ ಅಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತೆ ಕೈಗೊಂಡಿದ್ದು, ಹೆಚ್ಚುವರಿಯಾಗಿ ಜಿಲ್ಲೆಯ ಇತರೆ ತಾಲೂಕುಗಳ ಪೊಲೀಸರನ್ನು ಭದ್ರತೆಗೆ ನೇಮಿಸಲಾಗುತ್ತಿದೆ.
ಉದ್ಘಾಟನಾ ಕಾರ್ಯಕ್ರಮ: ಮೇಕ್ಶಿಫ್ಟ್ ಆಸ್ಪತ್ರೆಯ ಉದ್ಘಾಟನಾ ಸಮಾರಂಭವನ್ನು ಬೆಳಿಗ್ಗೆ 11 ಗಂಟೆಗೆ ದೊಡ್ಡಬಳ್ಳಾಪುರ ನಗರದ ಮೇಕ್ಶಿಫ್ಟ್ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಕ್ಶಿಫ್ಟ್ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದು, ಸಮಾರಂಭದಲ್ಲಿ ಪೌರಾಡಳಿತ ಇಲಾಖೆ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಎನ್.ನಾಗರಾಜು(ಎಂ.ಟಿ.ಬಿ), ಕಂದಾಯ ಸಚಿವ ಆರ್.ಅಶೋಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ|| ಕೆ.ಸುಧಾಕರ್ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಲಿದ್ದಾರೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ, ನೆಲಮಂಗಲ ಕ್ಷೇತ್ರದ ಶಾಸಕ ಡಾ|| ಕೆ.ಶ್ರೀನಿವಾಸಮೂರ್ತಿ, ದೇವನಹಳ್ಳಿ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಕುಮಾರ್ ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಅ.ದೇವೇಗೌಡ, ಎಸ್.ರವಿ, ಯೋಜನಾ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಪಿ.ಹೇಮಲತಾ, ಎಪಿಎಂಸಿ ಅಧ್ಯಕ್ಷ ಎಮ್.ವಿಶ್ವನಾಥರೆಡ್ಡಿ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ, ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಂಘ ನಿಯಮಿತ ಅಧ್ಯಕ್ಷ ಸಿದ್ದರಾಮಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ|| ಕೋನ ವಂಶಿಕೃಷ್ಣ, ತಹಶೀಲ್ದಾರ್ ಟಿ.ಎಸ್.ಶಿವರಾಜ್, ಆರೋಗ್ಯಾಧಿಕಾರಿ ಡಾ.ಪರಮೇಶ್ವರ ಮತ್ತಿತರರು ಇರಲಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..