ದೊಡ್ಡಬಳ್ಳಾಪುರ: ನೀರಿನ ಅಭಾವ ಕಾಣುತ್ತಿರುವ ಬಯಲುಸೀಮೆಯ ಜಿಲ್ಲೆಗಳಲ್ಲಿ ಯಾವುದೇ ನದಿ ಮೂಲವಿಲ್ಲದಿರುವುದರಿಂದ ಕೆರೆ, ಕುಂಟೆ ಮೊದಲಾದ ನೀರಿನ ಮೂಲಗಳನ್ನು ಸಂರಕ್ಷಿಸಬೇಕಾದ ಅಗತ್ಯವಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ತಾಲೂಕಿನ ದೊಡ್ಡಬೆಳವಂಗಲ ವಲಯ ಕಸಾಘಟ್ಟ ಕಾರ್ಯಕ್ಷೇತ್ರದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಪುನಶ್ಚೇತನಗೊಳಿಸಿದ ಕಸಾಘಟ್ಟ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಸುರಿದ ಮಳೆ ಪ್ರಮಾಣದಿಂದಾಗಿ ತಾಲೂಕಿನ ಹಲವಾರು ಕೆರೆಗಳು ತುಂಬಿರುವುದು ಸಂತಸದ ಸಂಗತಿ. ಆದರೆ ನೀರಿನ ಮಿತ ಬಳಕೆ ಹಾಗೂ ಕೆರೆಗಳನ್ನು ಸಂರಕ್ಷಿಸದಿದ್ದರೆ ಮುಂದೆ ಅಪಾಯ ಕಾದಿದೆ. ಈ ದಿಸೆಯಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಕೆರೆಗಳ ಪುನಶ್ಚೇತನ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಯೋಜನಾಧಿಕಾರಿ ಸುಧಾ ಭಾಸ್ಕರ್ ನಾಯಕ್ ಮಾತನಾಡಿ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸರ್ವತೋಮುಖ ಅಭಿವೃದ್ಧಿಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಪೂಜ್ಯ ಡಾ. ವೀರೇಂದ್ರ ಹೆಗಡೆ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆದು ಬಂದಿದ್ದು, ಇದು 260ನೇ ಕೆರೆಯಾಗಿದೆ. ಅದೇ ರೀತಿ ಒಂದು ಕಸಾಘಟ್ಟ ಕೆರೆಯ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ 13 ಲಕ್ಷ ರೂಗಳನ್ನು ಮಂಜೂರಾತಿ ಮಾಡಿದ್ದು ಈಗ ಕೆರೆಯ ಹೂಳನ್ನು ಎತ್ತಿ ಉತ್ತಮ ರೀತಿಯಲ್ಲಿ ಕೆಲಸವನ್ನು ಪೂರ್ಣಗೊಳಿಸಿದ್ದು ಈಗ ತುಂಬಿರುವುದರಿಂದ ಕೆರೆಗೆ ಬಾಗಿನ ಅರ್ಪಿಸಿ ಸಮಿತಿಯವರಿಗೆ ಹಸ್ತಂತರ ಗೊಳಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕಮದಲ್ಲಿ ಕೆರೆ ಸಮಿತಿ ಅಧ್ಯಕ್ಷ ಗಿರೀಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್, ಹುಲಿಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ, ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿರ್ದೇಶಕ ಸತೀಶ್ ನಾಯಕ್, ಕೃಷಿ ಮೇಲ್ವಿಚಾರಕ ಕಾರ್ತಿಕ್, ಕೆರೆ ಸಮಿತಿಯ ಸದಸ್ಯರು ಹಾಗೂ ಊರಿನ ಗಣ್ಯರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ವೀರಗಾಸೆ ಕುಣಿತ, ಪೂರ್ಣಕುಂಭದೊಂದಿಗೆ ಮೆರವಣಿಗೆಯೊಂದಿಗೆ ಕೆರೆಗೆ ಬಾಗಿನ ಅರ್ಪಿಸಲಾಯಿತು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..