ಬೆಂಗಳೂರು, (ಜುಲೈ.29): ನನ್ನ ಬಿಜೆಪಿಯ ಮುಖಂಡರು ಸೇರಿದಂತೆ ಎಲ್ಲ ಪಕ್ಷದ ನಾಯಕರಿಗೂ ತಮ್ಮ ಮಕ್ಕಳನ್ನು ಬೆಳೆಸುವುದು, ಅಧಿಕಾರಕ್ಕೆ ತರುವುದೇ ಚಿಂತೆ. ಕಂಡವರ ಮಕ್ಕಳನ್ನು ಬೆಳೆಸಿದ ದೇವರಾಜ್ ಅರಸ್ ದೇವರಾದರು. ಆದರೆ ಸಿದ್ದರಾಮಯ್ಯ, ಯಡಿಯೂರಪ್ಪ, ಖರ್ಗೆ, ಕುಮಾರಣ್ಣ ಸೇರಿದಂತೆ ಎಲ್ಲ ಮುಖಂಡರಿಗೂ ತಮ್ಮ ಮಕ್ಕಳದ್ದೇ ಚಿಂತೆಯಾದರೆ ಕಂಡವರ ಮಕ್ಕಳನ್ನು ಬೆಳೆಸುವವರಾರು ಎಂದು ಮಾಜಿ ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ.
“ವಿಶ್ವವಾಣಿ ಪುಸ್ತಕ” ಪ್ರಕಾಶನ ಪ್ರಕಟಿಸಿದ ಒಂಬತ್ತು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಮಾತ್ರವೇ ತಂದೆ, ಮಗ, ಮಗಳು, ಸೊಸೆ, ಅಳಿಯ, ತಮ್ಮಂದಿರನ್ನು ಬೆಳೆಸಿ ಅಧಿಕಾರಕ್ಕೆ ತಂದು ರಾಜಕಾರಣಿಯನ್ನಾಗಿಸಲಾಗುತ್ತದೆ. ಆದರೆ ಬೇರೆ ಕ್ಷೇತ್ರದಲ್ಲಿ ಈ ಥರ ಇರುವುದಿಲ್ಲ.
ರಾಜಕೀಯವನ್ನನು ಜಾತಿ ರಾಜಕಾರಣ ನಿಯಂತ್ರಿಸುತ್ತದೆ. ಇಂಥದ್ದೊಂದು ವ್ಯವಸ್ಥೆ ಬದಲಾಗಬೇಕಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲ ಪಕ್ಷಗಳಲ್ಲೂ ನಾಯಕರಿಗೆ ಮಕ್ಕಳನ್ನು ಬೆಳೆಸುವುದು, ತಮ್ಮ ರಾಜಕೀಯ ಉತ್ತರಾಧಿಕಾರಿಗಳನ್ನಾಗಿಸುವುದೇ ಚಿಂತೆ ಬಿಟ್ಟರೆ ಜನತೆಯ ಚಿಂತೆ ಇಲ್ಲ. ಹೀಗಾಗಿ ಸಿದ್ದರಾಮಯ್ಯ ಅವರಂಥ ಮಾಸ್ ಲೀಡರ್ಸ್ ಕೂಡ ಹೊಂದಾಣಿಕೆ ರಾಜಕಾರಣವನ್ನೇ ಅವಲಂಬಿಸಿದ್ದಾರೆ ಎಂದು ಕುಟುಕಿದ್ದಾರೆ.
ಇತ್ತೀಚಿನ ಪತ್ರಿಕೋದ್ಯಮಕ್ಕೂ ವಿಶ್ವೇಶ್ವರ ಭಟ್ ಅವರೇ ಆರಂಭಿಸಿದ ಕ್ರಾಂತಿಕಾರಿಕ ಪತ್ರಿಕೋದ್ಯಮಕ್ಕೂ ಅಜಗಜಾಂತರವಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.
ವಿಜಯ ಕರ್ನಾಟಕ ಸಂಕಷ್ಟದ ಸಮಯದಲ್ಲಿ ವಿಶ್ವೇಶ್ವರ ಭಟ್ ಅವರು ಸಂಪಾದಕರಾಗಿ ಬಂದರು. ಆದರೆ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಸರಕಾರದ ಅಂಕುಡೊಂಕುಗಳನ್ನು ದೊಡ್ಡ ಪ್ರಮಾಣದಲ್ಲಿ ಎತ್ತಿಹಿಡಿಯುವ ಲೇಖನಗಳನ್ನು ಬರೆದರು.
‘ಎದ್ದೇಳು ರಂಗನಾಥ’ ಎಂದು ಸಚಿವ ಕೆ.ಎಚ್.ರಂಗನಾಥ್ ಅವರ ಬಗ್ಗೆ ಬರೆದಿದ್ದೆವು. ಆದರೆ ಈ ರೀತಿಯ ನೇರವಂತಿಕೆ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜಕಾರಣಿಗಳಿಗೆ ಎಷ್ಟು ಕೆಟ್ಟ ಹೆಸರಿದೆಯೋ, ಪತ್ರಿಕೋದ್ಯಮದ ಬಗ್ಗೆಯೂ ಅದೇ ರೀತಿಯ ಕೆಟ್ಟ ಹೆಸರು ಬಂದಿದೆ.
ಪತ್ರಿಕೋದ್ಯಮಕ್ಕೂ ಜಾತಿ ಕಾಲಿಟ್ಟಿದೆ. ಯಾವ ಬಗ್ಗೆಯಾದರೂ ನೇರವಂತಿಕೆಯಿಂದ ಬರೆಯುವ ಸಂಖ್ಯೆ ಕಡಿಮೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….