ಜೀವನದಿ ಕಾವೇರಿಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ..; ಫೋಟೋಗಳನ್ನು ನೋಡಿ

ಮೈಸೂರು, (ಜುಲೈ.29): ಕರುನಾಡ ಜೀವನದಿ ಕಾವೇರಿಗೆ ಕೃಷ್ಣರಾಜ ಜಲಾಶಯದಲ್ಲಿ ಪೂಜೆ ಮತ್ತು ಬಾಗಿನ ಸಮರ್ಪಣೆ ಕಾರ್ಯಕ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೆರವೇರಿಸಿದರು. 

ತಾಯಿ ಕಾವೇರಿಯು ರೈತಾಪಿಗಳು ಸೇರಿದಂತೆ ರಾಜ್ಯದ ಜನರಿಗೆ ಸಕಲ ಸಮೃದ್ಧಿಯನ್ನು ಕರುಣಿಸುವಂತೆ ಪ್ರಾರ್ಥಿಸಿ ಪುಷ್ಪ ಸಮರ್ಪಣೆ, ಹಾಲಿನ ಅಭಿಷೇಕ ನಡೆಸಲಾಯಿತು. ಬಳಿಕ ಬಾಗಿನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಾಡಿಗೆ ಸಂಬಂಧಿಸಿದ ಭಕ್ತಿಗೀತೆಗಳು ಮೊಳಗಿದವು.

ನೀರಿಲ್ಲದೆ ಪರದಾಡುವಂತಾಗಿದ್ದ ರಾಜ್ಯದಲ್ಲಿ ಮಳೆರಾಯ ಕರುಣೆ ತೋರಿದ್ದರಿಂದ ಮಳೆಯಾಗುತ್ತಿದ್ದು ಕಾವೇರಿ ನದಿ ಕೂಡ ಮೈದುಂಬಿ ಹರಿಯುತ್ತಿದೆ. ಇದರಿಂದ ಮಂಡ್ಯ ಸೇರಿದಂತೆ ಸುತ್ತಲ ರೈತರ ಮೊಗದಲ್ಲಿ ನಗು ಕಾಣಿಸಿಕೊಂಡಿದೆ.

ಈ ವೇಳೆ ಸಚಿವರಾದ ಚೆಲುವರಾಯಸ್ವಾಮಿ, ಮಹದೇವಪ್ಪ ಶಾಸಕ ನರೇಂದ್ರ ಸ್ವಾಮಿ ಮುಂತಾದ ಹಲವು ಗಣ್ಯರು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಡಿಸಿಎಂ ಕೌಂಟರ್; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲ್ಗುಣ ಸರಿ ಇಲ್ಲ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದರು. ಅವರು ಬಂದರೆ ಮಳೆ ಬರುವುದಿಲ್ಲ ಎನ್ನುತ್ತಿದ್ದರು. ಈಗ ಏನಾಗಿದೆ ನೋಡಿ?’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿ, ‘ರಾಜ್ಯದ ಎಲ್ಲಾ ಜಲಾಶಯಗಳೂ ಭರ್ತಿಯಾಗಿವೆ. ತಮಿಳುನಾಡಿಗೆ ಅಗತ್ಯಕ್ಕಿಂತಲೂ ಹೆಚ್ಚು ನೀರು ಹರಿದು ಹೋಗಿದೆ. ಎರಡೂ ರಾಜ್ಯದವರೂ ಸಂತೋಷವಾಗಿದ್ದಾರೆ. ಎರಡೂ ರಾಜ್ಯಗಳಲ್ಲಿ ಕೆರೆ- ಕಟ್ಟೆಗಳು ತುಂಬಿವೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ಮೇಕೆದಾಟು ಅಣೆಕಟ್ಟು ಕಟ್ಟಲು ನಾವು ಸಿದ್ಧರಿದ್ದೇವೆ. ತಮಿಳುನಾಡಿನವರು ರಾಜಕೀಯ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ. ಕೇಂದ್ರದವರು ಮಧ್ಯಸ್ಥಿಕೆ ವಹಿಸಲಿ’ ಎಂದು ಹೇಳಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….