ದೆಹಲಿ: ಪ್ರತಿವರ್ಷ ಚೈತ್ರ ಮಾಸದ ಶುಕ್ಲಪಕ್ಷದ ತ್ರಯೋದಶಿ ದಿನ ಮಹಾವೀರ ಜಯಂತಿ ಆಚರಿಸಲಾಗುತ್ತದೆ.
ಈ ಬಾರಿ ಏ.10ರಂದು ಮಹಾವೀರ ಜಯಂತಿ ಆಚರಣೆ ನಡೆಯಲಿದ್ದು, ದೇಶಾದ್ಯಂತ ಬ್ಯಾಂಕ್‌ಗಳು, ಶಾಲಾ-ಕಾಲೇಜುಗಳಿಗೆ ಹಾಗೂ ಷೇರುಪೇಟೆಗೂ ರಜೆ ಇರಲಿದೆ.
ರಾಜ್ಯ ಸರಕಾರಗಳ ಆದೇಶಾ ನುಸಾರ ಸರಕಾರಿ ಕಚೇರಿಗಳಿಗೆ ರಜೆ ಇರಲಿದೆ. ಮಹಾವೀರ ಜಯಂತಿಯನ್ನು ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಇರುವ ಜೈನ ಸಮುದಾಯವರು ಭಕ್ತಿ ಶ್ರದ್ದೆ ಯಿಂದ ಆಚರಿಸುತ್ತಾರೆ.
ಜೈನ ಧರ್ಮದ ಅನುಯಾಯಿಗಳು ಪ್ರಾರ್ಥನೆ, ಮೆರವಣಿಗೆ, ದಾನ ಕಾರ್ಯಗಳಲ್ಲಿ ತೊಡಗಿ ಮಹಾವೀರರ ಜಯಂತಿಯನ್ನು ಆಚರಿಸುತ್ತಾರೆ.
ಹಿಂದೂ ಪಂಚಾಂಗ ಪ್ರಕಾರ ಶ್ರೀ ಮಹಾವೀರರು ಕ್ರಿ.ಪೂ 599ರಲ್ಲಿ ಚೈತ್ರ ಮಾಸದ 13ನೇ ದಿನ ಬಿಹಾರದ ಕುಂದಾಗ್ರಾಮದ ರಾಜಮನೆತನದಲ್ಲಿ ಜನಿಸಿದರು.
ಬಾಲ್ಯದ ಹೆಸರು ವರ್ಧಮಾನ್ ಆಗಿತ್ತು. 30ನೇ ವಯಸ್ಸಿನಲ್ಲಿ ಸಿಂಹಾಸನ ತ್ಯಜಿಸಿ ಆಧ್ಯಾತ್ಮದ ಮಾರ್ಗ ಆರಿಸಿಕೊಂಡರು.
ಭಗವಾನ್ ಮಹಾವೀರರ ಬೋಧನೆಗಳಾದ ಅಹಿಂಸೆ, ಸತ್ಯ, ಅಪರಿಗ್ರಹ ಮತ್ತು ಸನ್ಯಾಸ ಜನರ ನೈತಿಕ ನಡವಳಿಕೆಗೆ ಅಡಿಪಾಯ ನಿರ್ಮಿಸಿಕೊಡುತ್ತದೆ.