ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಆಡಳಿತ ವ್ಯವಸ್ಥೆ ನಿಯಂತ್ರಣ ಕಳೆದುಕೊಂಡಿರುವ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ಮನೆ ಮಾಡಿದೆ.
ಇದಕ್ಕೆ ಪೂರಕ ಎಂಬಂತೆ ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಕಚೇರಿಗಳ ಮೇಲೆ ಪದೇ ಪದೇ ಲೋಕಾಯುಕ್ತ ಅಧಿಕಾರಿಗಳ ದಾಳಿ ಸಾರ್ವಜನಿಕರ ಆರೋಪಕ್ಕೆ ಸಾಕ್ಷಿಯಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಮಿತಿಮೀರಿದ ಲಂಚಾವತಾರ, ಯೋಜನೆಗಳ ಅನುಷ್ಠಾನದಲ್ಲಿ ಲೋಪ, ಸಮನ್ವಯದ ಕೊರತೆ ಸೇರಿದಂತೆ ಅನೇಕ ಅಧಿಕಾರಿಗಳ ಬೇಕಾಬಿಟ್ಟಿ ವರ್ತನೆ ಹಿನ್ನೆಲೆಯಲ್ಲಿ ಸರ್ಕಾರದ ಸಚಿವರು, ಲೋಕಾಯುಕ್ತ ಅಧಿಕಾರಿಗಳು ಪದೇ ಪದೆ ತಾಲೂಕಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ವರ್ತನೆ ಕುರಿತು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೇ ರೀತಿ ಬಹು ದಿನಗಳಿಂದ ರಾಗಿ ಖರೀದಿ ಕೇಂದ್ರದಲ್ಲಿನ ಅವ್ಯವಸ್ಥೆ ಕುರಿತು ರೈತರ ದೂರು ಬಂದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಸೋಮವಾರ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿನ ಕೇಂದ್ರ, ಅಳತೆ ಮಾಪನ ಕೇಂದ್ರ, ಗೋದಾಮುಗಳಿಗೆ ಭೇಟಿ ನೀಡಿದ ಅವರು ರೈತರ ಸಮಸ್ಯೆ ಆಲಿಸಿ, ನಿಯಮ ಪಾಲಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಸ್ವಯಂ ದೂರು ದಾಖಲಿಸಿಕೊಂಡಿರುವುದಾಗಿ ತಿಳಿಸಿದರು.
ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡುವ ರೈತರು ಪ್ರತಿ ಹಂತದಲ್ಲೂ ಖರೀದಿ ಕೇಂದ್ರದಲ್ಲಿ ಬಯೋಮೆಟ್ರಿಕ್ ನೀಡುವುದು ಕಡ್ಡಾಯ. ಪಹಣಿಗಳಲ್ಲಿ ಹೆಸರು ಇರುವ ಬಹುತೇಕ ರೈತರು ಹಿರಿಯ ನಾಗರಿಕರೇ ಆಗಿದ್ದಾರೆ. ಆದರೆ ರಾಗಿ ಖರೀದಿ ಕೇಂದ್ರದ ಬಳಿ ಶೌಚಾಲಯ, ಕುಡಿಯುವ ನೀರು, ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲವೆಂದು ಹಿರಿಯ ರೈತ ಮಹಿಳೆಯರಿಂದ ದೂರು ಕೇಳುತ್ತಿದ್ದಂತೆ ಕೆಂಡಾಮಂಡಲವಾದ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಮಂಗಳವಾರದಿಂದಲೇ ಕನಿಷ್ಠ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸೂಚಿಸಿದರು.
ಎಸಿ, ತಹಶಿಲ್ದಾರ್ ಈ ಕುರಿತು ಗಮನ ಹರಿಸಬೇಕು, ನಮಗೂ ಇದಕ್ಕೆ ಸಂಬಂಧ ಇಲ್ಲವೆಂಬಂತೆ ಇದ್ದರೆ ಸಾಲದು, ಸೌಕರ್ಯಗಳು ಕಲ್ಪಿಸಲಾಗಿದೆಯೇ ಎಂದು ಖಾತರಿಪಡಿಸಿಕೊಳ್ಳಲು ಮೂರು ದಿನಗಳಲ್ಲಿ ಮತ್ತೆ ಭೇಟಿ ನೀಡಲಾಗುವುದು ಎಂದು ತಿಳಿಸಿದರು.
ಬಯೋಮೆಟ್ರಿಕ್ ಪಡೆಯಲು ಹಿರಿಯ ನಾಗರೀಕರು, ಮಹಿಳೆಯರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಕೌಂಟರ್ ತೆರೆಯಬೇಕು. ಎಲ್ಲರನ್ನು ಒಂದೇ ಸಾಲಿನಲ್ಲಿ ನಿಲ್ಲಿಸುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದೀರಿ. ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಜನರಿಗೆ ಸಕಾಲದಲ್ಲಿ ಜನರಿಗೆ ತಲುಪಿಸದ ಅಧಿಕಾರಿಗಳು ಸೂಕ್ತ ಉತ್ತರ ನೀಡಲೇಬೇಕು ಎಂದರು.