ದೊಡ್ಡಬಳ್ಳಾಪುರ: ತಮಿಳು ನಟ ಕಮಲ್ ಹಾಸನ್ (Kamal Haasan) ಅವರು ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ವಿವಾದಕ್ಕೆ ಗುರಿಯಾಗಿದ್ದಾರೆ.
ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ ಎಂದು ಹೇಳಿದ ಅವರ ಹೇಳಿಕೆ ಬಗ್ಗೆ, ಕ್ಷಮೆ ಕೋರದೇ ಇರುವ ಉದ್ಧಟತನ ಈಗ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕಮಲ್ ಹಾಸನ್ ಅವರ ಹೊಸ ಚಿತ್ರ ಥಗ್ ಲೈಫ್ ಚಿತ್ರದ ಪ್ರೊಮೋಷನ್ಸ್ಗೆ ಚಿತ್ರತಂಡ ಕಾರ್ಯಕ್ರಮ ನಡೆಸಿತ್ತು. ಆ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ (Shiva Rajkumar) ಸಹ ಭಾಗಿಯಾಗಿದ್ರು.
ಶಿವರಾಜ್ ಕುಮಾರ್ ಅವರ ಎದುರಲ್ಲೇ ಕಮಲ್ ಹಾಸನ್ ಹೀಗೆ ಕನ್ನಡದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಕ್ಕೆ ಭಾರಿ ಆಕ್ರೋಶಗಳು ಕೇಳಿ ಬಂದಿವೆ.
ಈ ಹಿನ್ನೆಲೆಯಲ್ಲಿ ಇಂದು ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ(ರಿ) ರಾಜ್ಯ ಸಮಿತಿ ಮತ್ತು ಜಲ್ಲಾ ಸಮಿತಿ ಹಾಗೂ ತಾಲ್ಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಎ.ನಂಜಪ್ಪ, ನಮ್ಮ ಕನ್ನಡ ನಾಡಿಗೆ ಲಿಪಿಯ ಗ್ರಂಥವಿದೆ, 2500 ವರ್ಷಗಳ ಇತಿಹಾಸವಿದೆ. ಕಮಲ್ ಹಾಸನ್ ಒಬ್ಬ ಅವಿವೇಕಿ ಅವನಿಗೆ ಇತಿಹಾಸದ ಬಗ್ಗೆ ಗೊತ್ತಿಲ್ಲ, ತನ್ನ ಚಿತ್ರದ ಪ್ರಚಾರದ ಕಾರ್ಯಕ್ರಮದಲ್ಲಿ ಈ ರೀತಿಯ ಒಂದು ಹೇಳಿಕೆ ನೀಡಿದ್ದಾನೆ.
ಯಾರೇ ಆಗಲಿ ಕನ್ನಡದ ವಿರುದ್ಧ ಕನ್ನಡ ನಾಡಿನ ನೆಲ ಜಲ ಭಾಷೆ ಗಡಿ ವಿರುದ್ಧ ಹಗುರವಾಗಿ ಮಾತನಾಡಿದರೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸಹಿಸುವುದಿಲ್ಲ, ಕಮಲ್ ಹಾಸನ್ ಕರ್ನಾಟಕ ಜನತೆಗೆ ಕ್ಷಮೆಯಾಚಿಸಬೇಕು, ಇಲ್ಲವಾದಲ್ಲಿ ನಮ್ಮ ಕನ್ನಡ ನಾಡಿನಲ್ಲಿ ತಮಿಳು ಚಿತ್ರಗಳನ್ನು ಬಿಡುಗಡೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.
ಹಿರಿಯ ಹೋರಾಟಗಾರ, ರಾಜ್ಯ ಸಮಿತಿಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಹನುಮಂತರೆಡ್ಡಿ ಮಾತನಾಡಿ, ತಮಿಳು ಚಿತ್ರ ನಟ ಕಮಲಹಾಸನ್ ಗೆ ಮಾನ ಮರ್ಯಾದೆ ಇಲ್ಲ. ಇಲ್ಲಿನ ಅನ್ನ ತಿಂದು, ಇಲ್ಲಿನ ನೀರು ಕುಡಿದು, ಕನ್ನಡದ ಬಗ್ಗೆ ಗೊತ್ತಿಲ್ಲದೆ ಪೂರ ಹುಚ್ಚನಂತೆ ಮಾತನಾಡಿದ್ದಾನೆ.
ಇತಿಹಾಸದ ಪುಟಗಳನ್ನು ತೆಗೆದು ನೋಡಲಿ ಅವನಿಗೆ ತಿಳಿಯುವುದು ಯಾವ ಬಾಷೆ ಅಗ್ರಸ್ಥಾನದ ಭಾಷೆ ಎಂದು ತಿಳಿಯುವುದು. ಈ ತರಹದ ಹೇಳಿಕೆಗಳನ್ನು ನೀಡಿದರೆ ಕನ್ನಡಿಗರು ಸಹಿಸುವುದಿಲ್ಲ, ಮುಂದಿನ ದಿನಗಳಲ್ಲಿ ನಿಮ್ಮ ವಿರುದ್ಧ ಉಗ್ರ ಹೋರಾಟದ ಜೊತೆಗೆಷ ಕಾನೂನು ರೀತಿಯ ಕ್ರಮ ಜರುಗಿಸುವ ಕುರಿತು ಎಲ್ಲಾ ರೀತಿಯ ಕ್ರಮಗಳನ್ನು ಜರುಗಿಸುವುದಾಗಿ ನುಡಿದರು.
ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ಹೆಚ್. ಮಂಜುನಾಥ್ ಮಾತನಾಡಿ, ಮೇರು ನಟ ಡಾಕ್ಟರ್ ರಾಜಕುಮಾರ್ ಅವರ ಪುತ್ರ ಶಿವರಾಜ್ ಕುಮಾರ್ ರವರ ಮುಂದೆ ಕಮಲ್ ಹಾಸನ್ ಈ ರೀತಿ ಕನ್ನಡದ ಕುರಿತು ಹೇಳಿಕೆ ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಹರಿಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಪ್ರವೀಣ್, ಬಿ.ನಯಾಜ್ ಖಾನ್, ಗಂಗರಾಜು, ಕುಮುದ, ಶಶಿಕಲಾ, ರೇಷ್ಮಾ, ರಾಗಿಣಿ, ಶಾರದಮ್ಮ, ವಿನಯ್, ಕಿರಣ್, ಲಕ್ಷಣ್, ಮಧು, ಚಂದ್ರಶೇಖರಯ್ಯ, ಪಿರ್ ಪಾಷ ಮತ್ತಿತರರಿದ್ದರು.