ಬೆಂಗಳೂರು, (ಜುಲೈ. 29); ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಕಾವೇರಿ ಪಾತ್ರದ ನಾಲ್ಕು ಜಲಾಶಯಗಳು ಭರ್ತಿಯಾಗಿದ್ದು, ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಲ್ಲಿ ಬಾಗಿನ ಅರ್ಪಣೆ ಮಾಡಲಿದ್ದಾರೆ.
ಕಳೆದ ವರ್ಷ ಭೀಕರ ಬರ ಎದುರಾಗಿದ್ದರಿಂದ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿರಲಿಲ್ಲ. ಅದರಲ್ಲಿಯೂ ಕಾವೇರಿ ನದಿಪಾತ್ರದ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರು ಸಂಗ್ರಹವಾಗಿತ್ತು.
ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಕೆಆರ್‌ಎಸ್, ಕಬಿನಿ ಜಲಾಶಯಗಳು ಭರ್ತಿಯಾಗಿ, ಒಳಹರಿವಿನ ಪ್ರಮಾಣದಷ್ಟೇ ನೀರು ಹೊರ ಹೋಗುತ್ತಿದೆ. ಆದ್ದರಿಂದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಸೋಮವಾರ ಬಾಗಿನ ಅರ್ಪಣೆ ಮಾಡಲಿದ್ದಾರೆ.
10 ವರ್ಷದಲ್ಲಿ ಆರನೇ ಬಾರಿ ಬಾಗಿನ ಅರ್ಪಣೆ: ಕಳೆದ 10 ವರ್ಷಗಳಲ್ಲಿ ಆರನೇ ಬಾರಿಗೆ ಕೆಆರ್‌ಎಸ್‌ನಲ್ಲಿ ಕಾವೇರಿ ಮಾತೆಗೆ ಬಾಗಿನ ಸಲ್ಲಿಸಲಾಗುತ್ತಿದೆ.
2015ರಿಂದ ಸತತ ಮೂರು ವರ್ಷ ಕಾಲ ಕೆಆರ್‌ಎಸ್ ಭರ್ತಿಯಾಗಿರಲಿಲ್ಲ. 2015ರಲ್ಲಿ ನವೆಂಬರ್ 17ರಂದು 111 ಅಡಿ, 2016ರಲ್ಲಿ ಜುಲೈ 28ರಂದು 99.65 ಅಡಿ ಹಾಗೂ 2017ರಲ್ಲಿ ಆಗಸ್ಟ್ 23ರಂದು 114.32 ಅಡಿ ಮಾತ್ರವೇ ನೀರು ತುಂಬಿತ್ತು. ಹೀಗಾಗಿ ಮೂರು ವರ್ಷವೂ ಕಟ್ಟೆ ಭರ್ತಿಯಾಗದ ಕಾರಣ ಕಾವೇರಿ ಮಾತೆಗೆ ಬಾಗಿನ ಸಲ್ಲಿಕೆಯಾಗಿರಲಿಲ್ಲ.
2018ರಲ್ಲಿ ಎಚ್.ಡಿ.ಕುಮಾರಸ್ವಾಮಿ, 2019 ಮತ್ತು 2020ರಲ್ಲಿ ಬಿ.ಎಸ್.ಯಡಿಯೂರಪ್ಪ, 2021, 2022ರಲ್ಲಿ ಸತತ ಎರಡು ವರ್ಷ ಬಸವರಾಜ ಬೊಮ್ಮಾಯಿ ಬಾಗಿನ ಸಲ್ಲಿಸಿದ್ದರು.
2023ರಲ್ಲಿ ಜಲಾಶಯದ ತುಂಬದ ಕಾರಣಕ್ಕೆ ಬಾಗಿನ ಸಲ್ಲಿಕೆ ಕಾರ್ಯಕ್ರಮ ನಡೆದಿರಲಿಲ್ಲ. ಈ ವರ್ಷ ಜುಲೈ 24ಕ್ಕೆ ಕಟ್ಟೆ ಭರ್ತಿಯಾಗಿದ್ದು, 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಾಗಿನ ಸಲ್ಲಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಎನ್.ಚೆಲುವರಾಯಸ್ವಾಮಿ, ಬೋಸರಾಜು ಭಾಗವಹಿಸಲಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….