ದೊಡ್ಡಬಳ್ಳಾಪುರ: ತಾಲೂಕಿನ ಚಿಗರೇನಹಳ್ಳಿ ಬಳಿಯಿರುವ ಬಿಬಿಎಂಪಿ ಕಸ ತ್ಯಾಜ್ಯ ವಿಲೇವಾರಿ ಎಂಎಸ್ಜಿಪಿ ಘಟಕ ಮುಚ್ಚುವಂತೆ ನಡೆಸಲಾಗುತ್ತಿದ್ದ ಹೋರಾಟವನ್ನು ಪೊಲೀಸ್ ಬಲಪ್ರಯೋಗದ ಮೂಲಕ ತೆರವುಗೊಳಿಸಿದ್ದು, ಮುಖಂಡರನ್ನು ಬಂಧಿಸಲಾಗಿದೆ.
ಓಮಿಕ್ರಾನ್ ಸೋಂಕಿನ ಕಾರಣ ಜಿಲ್ಲಾಧಿಕಾರಿ ಜಾರಿಗೆ ತಂದಿದ್ದ ನೂತನ ಕೋವಿಡ್ ನಿಯಮದ ಹಿನ್ನಲೆಯಲ್ಲಿ ನೂರಾರು ಪೊಲೀಸರ ಮೂಲಕ ಧರಣಿ ನಿರತರನ್ನು ಬಂಧಿಸಿರುವುದಲ್ಲದೆ, 10 ದಿನಗಳಿಂದ ಧರಣಿ ನಡೆಸುತ್ತಿದ್ದ ಪೆಂಡಾಲ್ ತೆರವುಗೊಳಿಸಲಾಗಿದೆ.
ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್, ತಹಶೀಲ್ದಾರ್ ಟಿ.ಎಸ್. ಶಿವರಾಜು, ಡಿವೈಎಸ್ಪಿ ನಾಗರಾಜು ನೇತೃತ್ವದಲ್ಲಿ 300ಕ್ಕು ಹೆಚ್ಚು ಪೊಲೀಸರು ಹಾಗೂ ಬಿಬಿಎಂಪಿ ಮಾರ್ಷಲ್ ಗಳಿಂದ ತೆರವು ಕಾರ್ಯ ನಡೆಸಿದ್ದಾರೆ.
ಧರಣಿ ನೇತೃತ್ವ ವಹಿಸಿದ್ದ ಸಾರಥಿ ಸತ್ಯಪ್ರಕಾಶ್, ಜಿ.ಎನ್.ಪ್ರದೀಪ್, ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ದಲಿಂಗಯ್ಯ, ಗ್ರಾಮ ಪಂಚಾಯತಿ ಸದಸ್ಯರು, ಹೋರಾಟಕ್ಕೆ ಬಂದಿದ್ದ ರೈತರ ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ.
ಧರಣಿ ನಿರತರ ಆಕ್ರೋಶ: ಪೊಲೀಸ್ ಬಲಪ್ರಯೋಗದ ಮೂಲಕ ಧರಣಿ ಹತ್ತಿಕ್ಕುತ್ತಿರುವ ಅಧಿಕಾರಿಗಳ ಕ್ರಮವನ್ನು ಸಾರಥಿ ಸತ್ಯಪ್ರಕಾಶ್, ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ದಲಿಂಗಯ್ಯ, ನವ ಬೆಂಗಳೂರು ಹೋರಾಟ ಸಮಿತಿ ಅಧ್ಯಕ್ಷ ಜಿ.ಎನ್.ಪ್ರದೀಪ್ ಖಂಡಿಸಿದ್ದು, ಶಾಂತಿಯುತ ಹೋರಾಟಕ್ಕೆ ಅಧಿಕಾರಿಗಳು ಪೊಲೀಸ್ ಬಲಪ್ರಯೋಗ ಮಾಡಿ ಸಂವಿಧಾನವನ್ನು ಕಗ್ಗೋಲೆ ಮಾಡಿದ್ದಾರೆ.ಸಂವಿಧಾನ ಅಡಿಯಲ್ಲಿ ಕೋವಿಡ್ ನಿಯಮ ಪಾಲಿಸಿ ಹಳ್ಳಿ ಜನರ ಜೀವನಕ್ಕಾಗಿ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದರೆ ಅಧಿಕಾರಿಗಳು ಬಲಪ್ರಯೋಗ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….