ಬೆಂ.ಗ್ರಾ.ಜಿಲ್ಲೆ: ಪಿಎಂ-ಕಿಸಾನ್ ಯೋಜನೆಯಡಿ ಆರ್ಥಿಕ ಸಹಾಯವನ್ನು ಪಡೆಯಲು, ನೊಂದಾಯಿತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರ್ಹ ಫಲಾನುಭವಿಗಳು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಜಯಸ್ವಾಮಿ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಪಿಎಂ-ಕಿಸಾನ್ ಯೋಜನೆಯಡಿ ನೊಂದಾಯಿಸಿರುವ ಕೆಲವು ರೈತರ ವಿವರಗಳನ್ನು ನವೀಕೃತ ಭೂಮಿ ದತ್ತಾಂಶದೊಂದಿಗೆ ಹಾಗೂ ಇ-ಜನ್ಮ ದತ್ತಾಂಶದೊಂದಿಗೆ ತಂತ್ರಾಂಶ ಆಧಾರಿತ ಪರಿಶೀಲನೆ ನಡೆಸಿ, ವಿವರಗಳನ್ನು ಭೌತಿಕವಾಗಿ ಮರು ಪರಿಶೀಲಿಸುವುದು ಅವಶ್ಯಕವಾಗಿದೆ ಎಂದು ಕಂಡು ಬಂದಿರುವ ಹಿನ್ನೆಲೆ, ಅಂತಹ ರೈತರ ವಿವರಗಳನ್ನು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ.
ಮುಂದಿನ ಪಿಎಂ-ಕಿಸಾನ್ ಯೋಜನೆಯ ಆರ್ಥಿಕ ಸಹಾಯವನ್ನು ಪಡೆಯಲು, ಜಿಲ್ಲೆಯ ಎಲ್ಲಾ ರೈತರು ತಮ್ಮ ಎಲ್ಲಾ ದಾಖಲಾತಿಗಳೊಂದಿಗೆ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಕೂಡಲೇ ಭೇಟಿ ನೀಡಿ, ತಮ್ಮ ಅರ್ಹತೆಯ ಬಗ್ಗೆ ದಾಖಲಾತಿಗಳನ್ನು ಸಲ್ಲಿಸುವುದು.
ಈ ಪರಿಶೀಲನಾ ಕಾರ್ಯವನ್ನು ಈ ತಿಂಗಳ ಅಂತ್ಯದೊಳಗೆ ಮುಕ್ತಾಯಗೊಳಿಸಬೇಕಾಗಿರುವುದರಿಂದ ರೈತರು ತಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಇನ್ನಿತರೆ ಅಗತ್ಯ ದಾಖಲಾತಿಗಳೊಂದಿಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ತಮ್ಮ ಪಿಎಂ-ಕಿಸಾನ್ ಖಾತೆಯ ಇ-ಕೆವೈಸಿ ಮಾಡಿಸುವುದು.
ಫಲಾನುಭವಿಗಳು ವೆಬ್‌ಸೈಟ್: https://pmkisan.gov.in/portal ಗೆ ಭೇಟಿ ನೀಡಿ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಬೇಕು. ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ನಮೂದಿಸಿ, ಉಚಿತವಾಗಿ ಇ-ಕೆವೈಸಿ ಮಾಡಬಹುದು.
ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಜೋಡಣೆಯಾಗದ ರೈತರು ಅಥವಾ ಓಟಿಪಿ ಸೃಜನೆಯಾಗದ ರೈತರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ಶುಲ್ಕ ಪಾವತಿಸಿ, ಬಯೋಮೆಟ್ರಿಕ್ ಉಪಕರಣದಲ್ಲಿ ಬೆರಳು ನಮೂದಿಸಿ ಇ-ಕೆವೈಸಿ ಮಾಡಬಹುದು.
ಈ ಎರಡು ಅಂಶಗಳ ಬಗ್ಗೆ ಜಿಲ್ಲೆಯ ಎಲ್ಲಾ ರೈತರು ಗಮನಹರಿಸಿ ವ್ಯವಸ್ಥಿತ ರೀತಿಯಲ್ಲಿ ಪಿಎಂ-ಕಿಸಾನ್ ಯೋಜನೆಯ ಆರ್ಥಿಕ ನೆರವನ್ನು ಪಡೆಯಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಜಯಸ್ವಾಮಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….