ದೊಡ್ಡಬಳ್ಳಾಪುರ: ಸ್ವಾಮಿ ವಿವೇಕಾನಂದರೇ ಯುವಕರ ನಿಜವಾದ ಹೀರೋ. ಭಾರತ ಮಾತೆಯೇ ನಮ್ಮೆಲ್ಲರ ತಾಯಿ. ದೇಶದ ಏಳಿಗೆಗಾಗಿ ಚಿಂತಿಸಿ, ರಾಷ್ಟ್ರ ಕಟ್ಟುವ ಕಾಯಕದಲ್ಲಿ ನಾವೆಲ್ಲರೂ ಕಾರ್ಯೋನ್ಮುಖವಾಗಬೇಕಿದೆ ಎಂದು ತುಮಕೂರಿನ ನಿಭರ್ಯ ಯೂತ್ಸ್ ಫೆಡರೇಶನ್ ಸಂಸ್ಥಾಪಕ ಗಗನ್ ಅಬ್ಬಿನಹೊಳೆ ಪ್ರತಿಪಾದಿಸಿದರು.
ವಿವೇಕಾನಂದ ಯುವಕ ಸಂಘದ ವತಿಯಿಂದ ನಗರದ ಶ್ರೀ ಕೊಂಗಾಡಿಯಪ್ಪ ಪದವಿ ಕಾಲೇಜಿನಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 159ನೇ ಜಯಂತಿ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘‘ಅರವಿಂದರು, ಸುಭಾಶ್ ಚಂದ್ರ ಬೋಸ್, ರವೀಂದ್ರನಾಥ ಟಾಗೂರ್, ಬಾಲಗಂಗಾಧರ ತಿಲಕರು ಸೇರಿದಂತೆ ಅನೇಕರ ಮಹನೀಯರಿಗೆ ವಿವೇಕಾನಂದರು ಆದರ್ಶಪ್ರಾಯರಾಗಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಅನೇಕರು ಧುಮುಕಲು ಅವರು ಪ್ರೇರೇಣೆಯಾಗಿದ್ದರು. ಈಗಲು ಸಹ ವಿವೇಕ ವಾಣಿಯು ಸಿಂಹ ಸದೃಶ್ಯದಂತೆ ಬಳಿ ಬಂದವರೆಲ್ಲರನ್ನೂ ಸೆಳೆದು, ಅಡಗಿರುವ ಉತ್ಸಾಹವನ್ನು ಹಿಮ್ಮಡಿಗೊಳಿಸುತ್ತಿದೆ,’’ ಎಂದರು.
ಸನ್ನದ್ಧ ಟ್ರಸ್ಟ್ ಅಧ್ಯಕ್ಷ ಶ್ರೀ ಭಾಸ್ಕರ್ ಎನ್. ಮಾತನಾಡಿ, ‘‘ರಾಷ್ಟ್ರ ಜಾಗೃತಿಯಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಸಚ್ಚಾರಿತ್ರ್ಯದಿಂದ ಮಾತ್ರ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯ. ಯುವಕರು ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿಯನ್ನು ವೃದ್ಧಿಸಿಕೊಳ್ಳುವ ಮೂಲಕ ವ್ಯಕ್ತಿತ್ವ ವಿಕಸನಗೊಳಿಸಕೊಳ್ಳಬೇಕಿದೆ. ನವ ಭಾರತ ನಿರ್ಮಾಣ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರು ತಾರಣ್ಯ ಶಕ್ತಿಯ ಮೇಲೆ ಅದಮ್ಯ ವಿಶ್ವಾಸ ಇಟ್ಟಿಕೊಂಡಿದ್ದರು. ಅವರ ಅಮೃತ ವಾಣಿಯು ನಮ್ಮಲ್ಲಿರುವ ಧೀಃಶಕ್ತಿಯನ್ನು ಸದಾ ಉದ್ದೀಪನಗೊಳಿಸುತ್ತಿದೆ,’’ ಎಂದು ಹೇಳಿದರು.
ಸಮಾರಂಭದಲ್ಲಿ ಶ್ರೀ ಕೊಂಗಾಡಿಯಪ್ಪ ಪದವಿ ಕಾಲೇಜು ಪ್ರಾಂಶುಪಾಲರಾದ ಪ್ರೊ. ನಾರಾಯಣ್ ಸ್ವಾಮಿ ಹಾಗೂ ವಿವೇಕಾನಂದ ಯುವಕ ಸಂಘದ ಸಂತೋಷ್ ರಾವ್ ಮಾತನಾಡಿದರು.
ಕಾಲೇಜಿನ ಸಂಯೋಜಕ ಮೇಜರ್ ಬಿ. ತಜಾಮುಲ್ ಪಾಷಾ, ಕನ್ನಡ ವಿಭಾಗದ ಮುಖ್ಯಸ್ಥ ಕೆ.ಎಚ್.ಪ್ರವೀಣ್, ಯುವ ಸಂಚಲನ ಸಂಸ್ಥಾಪಕ ಚಿದಾನಂದ್ ಸೇರಿದಂತೆ ಬೋಧಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….